ಬೆಂಗಳೂರು: ‘ಲೂಸಿಯಾ’ ಪವನ್ ನಿರ್ದೇಶನದ ‘ಯೂಟರ್ನ್’ ಚಿತ್ರವು ಈಗಾಗಲೇ ಆರು ಭಾಷೆಗಳಿಗೆ ರಿಮೇಕ್ ಆಗಿದೆ. ಕನ್ನಡದಲ್ಲಿ ಚಿತ್ರ ಹಿಟ್ ಆಗುತ್ತಿದ್ದಂತೆಯೇ, ಮಲಯಾಳಂಗೆ ‘ಕೇರ್ಫುಲ್’ ಎಂಬ ಹೆಸರಿನಲ್ಲಿ ರಿಮೇಕ್ ಆಯಿತು. ಈ ಚಿತ್ರವನ್ನು ತೆಲುಗು-ತಮಿಳಿಗೆ ಪವನ್ ಅವರೇ ರಿಮೇಕ್ ಮಾಡಿದರು. ಅಲ್ಲಿಂದ ಸಿಂಹಳಿ ಭಾಷೆಗೆ, ಆ ನಂತರ ಫಿಲಿಫಿನೋ ಭಾಷೆಗೆ ರಿಮೇಕ್ ಆದ ‘ಯೂಟರ್ನ್’, ಕಳೆದ ವರ್ಷ ಬಂಗಾಲಿಯಲ್ಲೂ ‘ಫ್ಲೈಓವರ್’ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಹೀಗೆ ಅಮೋಘ ಆರು ಭಾಷೆಗಳಲ್ಲಿ ಬಂದ ಈ ಚಿತ್ರ, ಇದೀಗ ಹಿಂದಿಯಲ್ಲೂ ರಿಮೇಕ್ ಆಗುವುದಕ್ಕೆ ಸಿದ್ಧತೆ ನಡೆಸಿದೆ. ಏಕ್ತಾ ಕಪೂರ್ ನಿರ್ವಿುಸುತ್ತಿರುವ ಈ ಚಿತ್ರವನ್ನು ಆರಿಫ್ ಖಾನ್ ಎಂಬುವವರು ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್ ನಟಿ ಪೂಜಾ ಬೇಡಿ ಅವರ ಮಗಳು ಅಲಾಯ ಫರ್ನೀಚರ್ವಾಲಾ, ಈ ಚಿತ್ರದಲ್ಲಿ ನಾಯಕಿ. ಮೂಲ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಮಾಡಿದ ಪಾತ್ರ, ಇದೀಗ ಅಲಾಯ ಪಾಲಾಗಿದೆ. ಇದಕ್ಕೂ ಮುನ್ನ, ‘ಜವಾನಿ ಜಾನೆಮನ್’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ಅಲಾಯಗೆ ನಾಯಕಿಯಾಗಿ ಇದು ಎರಡನೆಯ ಚಿತ್ರ.
ಈ ಹಿಂದೆ, ತೆಲುಗು ಮತ್ತು ತಮಿಳಿನಲ್ಲಿ ‘ಯೂಟರ್ನ್’ ಚಿತ್ರ ಮಾಡಿದ್ದ ಪವನ್, ಇದೀಗ ತೆಲುಗಿನಲ್ಲಿ ಸದ್ದಿಲ್ಲದೆ ಒಂದು ವೆಬ್ಸಿರೀಸ್ ಮಾಡಿದ್ದಾರೆ. ಹೆಸರು ‘ಕುಡಿ ಎಡಮೈತೆ’. ಎಂಟು ಎಪಿಸೋಡುಗಳ ಈ ಸೈನ್ಸ್- ಫಿಕ್ಷನ್ ಥ್ರಿಲ್ಲರ್ ವೆಬ್ ಸರಣಿಯು ಜುಲೈ 16ರಂದು ಆಹಾ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಪವನ್ ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ವೆಬ್ಸರಣಿಯಲ್ಲಿ ಕನ್ನಡದ ತಂತ್ರಜ್ಞರು ಕೆಲಸ ಮಾಡಿರುವುದು ವಿಶೇಷ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ಅಮಲಾ ಪೌಲ್, ರಾಹುಲ್ ವಿಜಯ್ ಮುಂತಾದವರು ನಟಿಸಿದ್ದಾರೆ.