ಸಿನಿವಾಣಿ

ಉತ್ತರಪ್ರದೇಶದಲ್ಲಿ 'ಭೈರವ': ಮುಹೂರ್ತದಲ್ಲಿ ಕಮರೊಟ್ಟು ಚೆಕ್‌ಪೋಸ್ಟ್ ಹುಡುಗ, ಮೊಟ್ಟೆಯ ಹುಡುಗಿ...

ಬೆಂಗಳೂರು: ಕಮರೊಟ್ಟು ಚೆಕ್‌ಪೋಸ್ಟ್‌‌ನ ಹುಡುಗ ಮತ್ತು ಮೊಟ್ಟೆಯ ಹುಡುಗಿ ಇತ್ತೀಚೆಗೆ ದೂರದ ಉತ್ತರಪ್ರದೇಶದಲ್ಲಿ ನಡೆದ ಮುಹೂರ್ತಕ್ಕೆ ಜೊತೆಯಾಗಿದ್ದಾರೆ. ಅಂದಹಾಗೆ ಇದಕ್ಕೆಲ್ಲ ಕಾರಣ 'ಭೈರವ'.

ಅಂದರೆ 'ಭೈರವ' ಎಂಬ ಹೊಸ ಕನ್ನಡ ಸಿನಿಮಾದ ಮುಹೂರ್ತ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದಿದೆ. ಅಲ್ಲಿನ ಗೋವಿಂದಪುರದ ಹನುಮಂತನ ಸನ್ನಿಧಿಯಲ್ಲಿ ಈ ಮುಹೂರ್ತ ನಡೆದಿದ್ದು, ಆ ಪ್ರದೇಶದ ಬಿಜೆಪಿ ಮುಖಂಡರಾದ ಡಾ. ಮಂಜು ಶಿವಾಜ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವಿಶೇಷವೆಂದರೆ ಈ ಚಿತ್ರದ ಶೀರ್ಷಿಕೆ ಅನಾವರಣ ಮುಂಬೈನಲ್ಲಿ ನಡೆದಿತ್ತು, ಇದೀಗ ಮುಹೂರ್ತ ಉತ್ತರಪ್ರದೇಶದಲ್ಲಿ ನೆರವೇರಿದೆ.

ರಾಮತೇಜ್ ನಿರ್ದೇಶನದ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಚಿದಂಬರ ಕುಲಕರ್ಣಿ ಆರಂಭ ಫಲಕ ತೋರಿದರು. ವಿಸಿಕಾ ಫಿಲಂ ಸಂಸ್ಥೆಯ ವೈಭವ್ ಬಜಾಜ್ ಹಾಗೂ ಹನಿ‌ ಚೌಧರಿ ಕ್ಯಾಮೆರಾ ಚಾಲನೆ‌ ಮಾಡಿದರು. ಅಲ್ಲದೆ ಚಿತ್ರತಂಡದ ಸದಸ್ಯ, ಮೀರತ್​ನ ಖ್ಯಾತ ವಕೀಲ ರಾಜಕುಮಾರ ಗುಪ್ತ ಮತ್ತು ಡಾ.ಸಂಜೀವ ಚೌಧರಿ ಸೇರಿ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಸಿನಿಮಾದಲ್ಲಿ 'ಕಮರೊಟ್ಟು ಚೆಕ್​ಪೋಸ್ಟ್​' ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಸನತ್ ನಾಯಕನಾಗಿ ಹಾಗೂ 'ಒಂದು ಮೊಟ್ಟೆಯ ಕಥೆ' ಚಿತ್ರದ ನಾಯಕಿಯರಲ್ಲಿ ಒಬ್ಬರಾಗಿ ಅಭಿನಯಿಸಿದ್ದ ಶೈಲಶ್ರೀ ಮುಲ್ಕಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಮುಹೂರ್ತದಲ್ಲಿ ಪಾಲ್ಗೊಂಡಿದ್ದರು.

ಖಳನಾಯಕನಾಗಿ ಉಮೇಶ ಸಕ್ಕರೆನಾಡು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂದೀಪ್ ಫ್ರೆಡ್ರಿಕ್ ಅವರ ಛಾಯಾಗ್ರಹಣ, ಕಪಿಲ್ ದೀಕ್ಷಿತ್ ಅವರ ಕ್ರಿಯೇಟಿವ್ ಡೈರೆಕ್ಷನ್ ಮತ್ತು ಕರಣ್ ಕ್ಷಿತಿ ಸುವರ್ಣ ಅವರ ಸಹನಿರ್ದೇಶನವಿದೆ.