ಸಿನಿವಾಣಿ

ಬರೀ ಊಟ ಅಷ್ಟೇ ಅಲ್ಲ, ಪ್ರೀತೀನೂ ಬೇಕು ... ಕಂಗನಾ ಆಗ್ರಹ

ಮನಾಲಿ: ಅನ್ನ ಹಾಕಿದ ಕೈಗಳನ್ನು ಕಚ್ಚಬಾರದು ಎಂದು ಹಿರಿಯ ನಟಿ ಮತ್ತು ಸಂಸದೆ ಜಯಾ ಬಚ್ಚನ್​ ಅವರು ಕಂಗನಾಗೆ ಹೇಳಿರುವುದು ಆಕೆಯನ್ನು ಭಾರಿ ಕೆರಳಿಸಿದಂತಿದೆ. 'ನಿಮ್ಮ ಮಗಳು ಶ್ವೇತಾಗೆ ಯಾರಾದರೂ ಹೊಡೆದು ಡ್ರಗ್ಸ್​ ಕೊಟ್ಟಿದ್ದರೆ ನೀವು ಇದೇ ರೀತಿ ಮಾತನಾಡುತ್ತಿದ್ದಿರಾ ಜಯಾಜಿ?' ಎಂದು ಕಂಗನಾ ಈಗಾಗಲೇ ಪ್ರಶ್ನಿಸಿಯಾಗಿದೆ.

ಈ ಕುರಿತು ಅವರು ಇದೀಗ ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ. ಅದರಲ್ಲೂ ಜಯಾ ಬಚ್ಚನ್​ ಅವರು ಹೇಳಿರುವುದರಲ್ಲೇನು ತಪ್ಪಿದೆ ಎಂದು ನೆಟ್ಟಿಗರೊಬ್ಬರು ಕಂಗನಾ ಅವರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಒಬ್ಬ ಸಂಸದೆಯಾಗಿ ಸರ್ಕಾರದ ಸಹಾಯ ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.

ಇದನ್ನು ಕಂಗನಾ ಅನುಮೋದಿಸುವುದರ ಜತೆಗೆ, ಚಿತ್ರರಂಗದಲ್ಲಿ ಹಲವು ಬದಲಾವಣೆಗಳಾಗಬೇಕಿವೆ ಎಂದಿದ್ದಾರೆ. ಪ್ರಮುಖವಾಗಿ ಮಹಿಳೆಯರಿಗೆ ಹೆಚ್ಚು ಸುರಕ್ಷತೆಯ ಅವಶ್ಯಕತೆ ಇದೆ ಎಂದಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಒಬ್ಬ ಜನಪ್ರಿಯ ನೃತ್ಯ ನಿರ್ದೇಶಕಿಯು ಹಿಂದೊಮ್ಮೆ ಕೇಳಿದ್ದರು. ಅತ್ಯಾಚಾರ ಮಾಡಿದರೇನು, ಊಟ ಹಾಕುತ್ತಿಲ್ಲವಾ? ಎಂದು ಪ್ರಶ್ನಿಸಿದ್ದರು. ಇದೆಂಥಾ ಮಾತು? ಮಹಿಳೆಯರು ಇಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ದೂರು ಕೊಡುವುದಕ್ಕೆ ಇಲ್ಲೊಂದು ವ್ಯವಸ್ಥೆಯೇ ಇಲ್ಲ. ಇಲ್ಲಿ ಸುರಕ್ಷತೆಯೂ ಇಲ್ಲ, ಯಾವುದೇ ನಿಯಮಗಳೂ ಇಲ್ಲ' ಎಂದು ಕಂಗನಾ ಹೇಳಿದ್ದಾರೆ.

ಮೊದಲಿಗೆ ಅನ್ನ ಸಿಕ್ಕರೆ ಸಾಕು ಎಂಬ ಮನಸ್ಥಿತಿ ಬದಲಾಗಬೇಕು ಎಂದಿರುವ ಅವರು, 'ಇಲ್ಲಿ ಬಡವರಿಗೆ ಊಟ ಸಿಗುವುದರ ಜತೆಗೆ, ಪ್ರೀತಿಯೂ ಸಿಗಬೇಕು. ಪ್ರಮುಖವಾಗಿ ಜ್ಯೂನಿಯರ್​ ಆರ್ಟಿಸ್ಟ್​ಗಳು ಮತ್ತು ಕಾರ್ಮಿಕರಿಗೆ ಏನೆಲ್ಲಾ ಆಗಬೇಕು ಎಂಬ ವಿಷಯದಲ್ಲಿ ನನ್ನಲ್ಲಿ ಒಂದು ದೊಡ್ಡ ಪಟ್ಟಿಯೇ ಇದೆ. ಒಂದೊಮ್ಮೆ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ, ಖಂಡಿತಾ ಅವರೊಂದಿಗೆ ಚರ್ಚಿಸುತ್ತೇನೆ. ಇದರಿಂದ ಬೇರೆಬೇರೆ ಕ್ಷೇತ್ರಗಳಲ್ಲಿರುವ ಅಸಂಘಟಿತ ಕಾರ್ಮಿಕರಿಗೂ ಬಹಳ ಸಹಾಯವಾಗುತ್ತದೆ' ಎಂದಿದ್ದಾರೆ ಕಂಗನಾ.