ಸಿನಿವಾಣಿ

20 ಕೆಜಿ ತೂಕ ಇಳಿಸಬೇಕಂತೆ ಕಂಗನಾ!

ಮುಂಬೈ: 'ತಲೈವಿ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿನ ಕೆಲವು ಚಿತ್ರಗಳನ್ನು ಕಂಗನಾ ರಣಾವತ್​ ಇತ್ತೀಚೆಗಷ್ಟೇ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜಯಲಲಿತಾ ಅವರ ಆಶೀರ್ವಾದದಿಂದ ಚಿತ್ರದ ಎರಡನೆಯ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ ಎಂದು ಹೇಳಿಕೊಂಡಿದ್ದರು.

ಚಿತ್ರೀಕರಣ ಬಹುತೇಕ ಮುಗಿಸಿರುವ ಕಂಗನಾ ಹೆಗಲ ಮೇಲೆ ಇದೀಗ ಒಂದು ಗುರುತರವಾದ ಜವಾಬ್ದಾರಿ ಇದೆ. ಜಯಲಲಿತಾ ಅವರ ಪಾತ್ರವನ್ನು ಈ ಚಿತ್ರದಲ್ಲಿ ಅವರು ಮಾಡುತ್ತಿದ್ದು, ಪಾತ್ರಕ್ಕಾಗಿ ಒಂದಿಷ್ಟು ತೂಕ ಹೆಚ್ಚಿಸಿಕೊಂಡಿದ್ದರು. ಈಗ ಅದನ್ನು ಇಳಿಸುವುದರ ಜತೆಗೆ ಮೊದಲಿನ ಸೈಜ್​ಗೆ ಹೋಗಬೇಕಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ''ತಲೈವಿ' ಚಿತ್ರಕ್ಕೆ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದೆ. ಇದೀಗ ಚಿತ್ರದ ಬಹುತೇಕ ಭಾಗ ಮುಗಿದಿದ್ದು, ಇನ್ನೊಂದಿಷ್ಟು ಭಾಗದ ಚಿತ್ರೀಕರಣ ಇದೆ. ಹಾಗಾಗಿ ಮೊದಲ ತೂಕ, ಆಕೃತಿ ಮತ್ತು ಚುರುಕುತನಕ್ಕೆ ಮತ್ತೆ ಮರಳಬೇಕಾಗಿದೆ. ಹಾಗಾಗಿ ದಿನಾ ಬೇಗ ಎದ್ದು ವಾಕಿಂಗ್​, ವಾಕಿಂಗ್​ಗೆ ಹೋಗುತ್ತಿದ್ದೇನೆ. ಯಾರೆಲ್ಲಾ ಜತೆಗೆ ಬರುತ್ತೀರಿ' ಎಂದು ಅವರು ಕೇಳಿದ್ದಾರೆ.

ಈ ಚಿತ್ರದ ಚಿತ್ರೀಕರಣ ಕೆಲವು ತಿಂಗಳ ಮುಂಚೆಯೇ ಮುಗಿಯಬೇಕಿತ್ತು. ಅಷ್ಟೇ ಅಲ್ಲ, ಚಿತ್ರವು ಜೂನ್​ 26ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸಹ ಹೇಳಿಕೊಂಡಿತ್ತು. ಆದರೆ, ಲಾಕ್​ಡೌನ್​ನಿಂದ ಚಿತ್ರತಂಡದ ಯೋಜನೆಗಳೆಲ್ಲಾ ತಲೆ ಕೆಳಗಾಗಿ, ಇತ್ತೀಚೆಗಷ್ಟೇ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಚೆನ್ನೈನಲ್ಲಿ ಪ್ರಾರಂಭವಾಗಿತ್ತು. ಲಾಕ್​ಡೌನ್​ ಸಮಯವನ್ನು ಮನಾಲಿಯಲ್ಲಿ ಕಳೆದಿದ್ದ ಕಂಗನಾ, ಶೂಟಿಂಗ್​ಗೆಂದು ಚೆನ್ನೈಗೆ ಬಂದು ತಮ್ಮ ಭಾಗದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ.