ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಕುರಿತು ಚರ್ಚೆ ಆಗುತ್ತಲೇ ಇದೆ. ಕಂಗನಾ ರಣಾವತ್ ಅಂತೂ ನೆಪೋಟಿಸಂ, ಬಾಲಿವುಡ್ ಮಾಫಿಯಾ ಅಂತ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.
ಈ ವಿಷಯದ ಬಗ್ಗೆ ಇತ್ತೀಚೆಗೆ ಮಾತನಾಡಿರುವ ಹಿರಿಯ ನಟ ನಾಸೀರುದ್ದೀನ್ ಷಾ, 'ಅದ್ಯಾರೋ ಅರ್ಧಂಬರ್ಧ ತಿಳಿದುಕೊಂಡ ನಟಿ ಮಾತಾಡಿದಳು ಎಂದು ಎಲ್ಲರೂ ಅದೇ ಮಾತಾಡುತ್ತಿದ್ದಾರೆ. ಈ ನೆಪೋಟಿಸಂ, ಬಾಲಿವುಡ್ ಮಾಫಿಯಾ ಎಲ್ಲವೂ ಸುಳ್ಳು. ಒಬ್ಬ ಮನುಷ್ಯ ತನ್ನ ಮಕ್ಕಳು ಸಹ ತನ್ನ ವೃತ್ತಿಯನ್ನು ಮುಂದುವರೆಸಬೇಕು ಎಂದು ಆಸೆಪಡುವುದು ತಪ್ಪಾ? ಇದ್ಯಾವ ನ್ಯಾಯ?' ಎಂದು ಪ್ರಶ್ನಿಸಿದ್ದರು.
ಇದಕ್ಕೆ ಕಂಗನಾ ರಣಾವತ್ ಉತ್ತರ ಕೊಟ್ಟಿದ್ದಾರೆ. ತಮ್ಮ ಮುಖವಾಣಿಯಾಗಿರುವ ಟೀಂ ಕಂಗನಾ ಮೂಲಕ ಒಂದಿಷ್ಟು ವಿಷಯ ಹೇಳಿಕೊಂಡಿದ್ದಾರೆ. 'ಧನ್ಯವಾದಗಳು ನಾಸೀರ್ಜೀ. ನನ್ನ ಸಮಾಕಾಲೀನರ್ಯಾರೂ (ಸ್ಟಾರ್ ಮಕ್ಕಳು) ಮಾಡದ ಸಾಧನೆಗಳನ್ನು ಮತ್ತು ಪಡೆಯದ ಪ್ರಶಸ್ತಿಗಳನ್ನು ನಾನು ಮಾಡಿದ್ದೇನೆ. ಅದಕ್ಕೆ ಸರಿಯಾದ ಮಾತು ಹೇಳಿದಿರಿ. ನನಗೆ ಇದೆಲ್ಲಾ ಅಭ್ಯಾಸವಾಗಿ ಹೋಗಿದೆ. ಒಂದು ಪಕ್ಷ ನಾನು ಪ್ರಕಾಶ್ ಪಡುಕೋಣೆ ಅಥವಾ ಅನಿಲ್ ಕಪೂರ್ ಮಗಳಾಗಿದ್ದರೆ ಇದೇ ಮಾತುಗಳನ್ನು ಹೇಳುತ್ತಿದ್ದಿರಾ?' ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮುಂದುವರೆಸಿರುವ ಅವರು, 'ನಾಸೀರ್ ಅವರು ಒಬ್ಬ ಅದ್ಭುತ ನಟ. ಅವರೆಂಥಾ ಮಹಾನ್ ನಟ ಎಂದರೆ, ಅವರ ಬೈಗುಳ ಸಹ ನಮಗೆ ಪ್ರಸಾದ ಇದ್ದ ಹಾಗೆ. ಇದರ ಬದಲು ಕಳೆದ ವರ್ಷ ಸಿನಿಮಾ ಬಗ್ಗೆ ನಾವು ಮಾಡಿದ ಅದ್ಭುತ ಚರ್ಚೆಯನ್ನ ಇನ್ನೊಮ್ಮೆ ನೋಡುವುದಕ್ಕೆ ಬಯಸುತ್ತೇನೆ' ಎಂದು ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.