ಬಾಲಿವುಡ್ನಲ್ಲಿ ಸದ್ಯಕ್ಕೆ ಸಖತ್ ಸುದ್ದಿಯಲ್ಲಿರುವವರೆಂದರೆ ಅದು ಕಂಗನಾ ರಣಾವತ್. ಬಾಲಿವುಡ್ ಮಾಫಿಯಾ ಮತ್ತು ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತು ಕಳೆದ ಕೆಲವು ವರ್ಷಗಳಿಂದ ಮಾತಾಡುತ್ತಲೇ ಬಂದಿರುವ ಅವರು, ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಇನ್ನೂ ಜಾಸ್ತಿ ಮಾಡಿದ್ದಾರೆ.
ಅದೇ ಕಾರಣಕ್ಕೆ, ಕಂಗನಾ ಅವರನ್ನು ಕಂಡರೆ ಆಗದ ಸಂಖ್ಯೆ ಬಾಲಿವುಡ್ನಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಚ್ಚಿದೆ. ಬಾಲಿವುಡ್ ಮಾಫಿಯಾ ಮತ್ತು ನೆಪೋಟಿಸಂ ವಿರುದ್ಧ ಟೀಕೆ ಮಾಡುತ್ತಿರುವುದರಿಂದ ಹಲವರಿಗೆ ತಮ್ಮ ಬಗ್ಗೆ ಸಿಟ್ಟಿದೆ ಮತ್ತು ತಮ್ಮ ಟ್ವಿಟರ್ ಖಾತೆ ಯಾವ ಕ್ಷಣ ಬೇಕಾದರೂ ಸಸ್ಪೆಂಡ್ ಆಗಬಹುದು ಎಂದು ಸ್ವತಃ ಕಂಗನಾ ಅವರೇ ಹೇಳಿಕೊಂಡಿದ್ದಾರೆ.
ಈ ಮಧ್ಯೆ, ಕಂಗನಾ ಅವರ ಮನಾಲಿ ಮನೆಯ ಸುತ್ತ ಗನ್ಶಾಟ್ ಕೇಳಿ ಬಂದಿತ್ತು ಎಂದು ಕಳೆದ ವಾರವಷ್ಟೇ ವರದಿಯಾಗಿತ್ತು. ಇದರಿಂದ ಕಂಗನಾ ಕುಟುಂಬದವರು ಸಾಕಷ್ಟು ಭಯಭೀತರಾಗಿದ್ದಾರೆ. ಇದೇ ಕಾರಣಕ್ಕೆ, ಕಂಗನಾ ಅವರ ತಾಯಿ 'ಮಹಾಮೃತ್ಯುಂಜಯ ಹೋಮ'ವನ್ನು ಭಾನುವಾರ ಆಯೋಜಿಸಿದ್ದರು.
ಈ ಕುರಿತು ಟೀಮ್ ಕಂಗನಾ ಖಾತೆಯ ಮೂಲಕ ಟ್ವೀಟ್ ಮಾಡಿರುವ ಕಂಗನಾ, 'ನನ್ನ ಸುರಕ್ಷತೆಯ ಬಗ್ಗೆ ಅಮ್ಮ ಬಹಳ ತಲೆ ಕೆಡಿಸಿಕೊಂಡಿದ್ದಾರೆ. ಅದೇ ಕಾರಣಕ್ಕೆ ಮನೆಯಲ್ಲಿ ಹೋಮ ಆಯೋಜಿಸಿದ್ದರು. ಒಂದು ಲಕ್ಷದ 15 ಸಾವಿರ ಬಾರಿ ಮಹಾಮೃತ್ಯುಂಜಯ ಮಂತ್ರ ಪಠಣವಾಯಿತು' ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನನಗೆ ರಾಜಕೀಯ ಸೇರುವ ಯೋಚನೆ ಇಲ್ಲ: ಕಂಗನಾ ರಣಾವತ್
ಜತೆಗೆ ಈ ಹೋಮದಲ್ಲಿ ಭಾಗವಹಿಸಿರುವ ಒಂದು ವಿಡಿಯೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಂಗನಾ ಜತೆಗೆ ಅವರ ತಾಯಿ ಮತ್ತು ಅಕ್ಕನ ಮಗ ಇರುವುದನ್ನು ನೋಡಬಹುದು.