ಮುಂಬೈ: ಭಾರತದ ತುರ್ತು ಪರಿಸ್ಥಿತಿಯ ಕುರಿತು ಬಾಲಿವುಡ್ ನಟಿ ಕಂಗನಾ ರಣಾವತ್ 'ಎಮರ್ಜೆನ್ಸಿ' ಎಂಬ ಚಿತ್ರ ಮಾಡುತ್ತಿರುವುದು ಗೊತ್ತೇ ಇದೆ. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯಾಗಿ ನಟಿಸುತ್ತಿರುವುದು ಸಾಕಷ್ಟು ಸುದ್ದಿಯಾಗಿದೆ. ಈಗ ಈ ಚಿತ್ರದ ನಿರ್ಮಾಣಕ್ಕಾಗಿ ಕಂಗನಾ ಮನೆಯನ್ನು ಅಡವಿಟ್ಟಿದ್ದಾರಂತೆ.
''ಎಮರ್ಜೆನ್ಸಿ' ಚಿತ್ರದ ಚಿತ್ರೀಕರಣ ಮುಗಿಯುವ ಮೂಲಕ, ನನ್ನ ಬದುಕಿನ ಒಂದು ಭವ್ಯವಾದ ಅಧ್ಯಾಯ ಮುಗಿದಂತಾಗಿದೆ. ನಾನು ಈ ಚಿತ್ರವನ್ನು ಸಲೀಸಾಗಿ ಮುಗಿಸಿರಬಹುದು ಎಂದು ಎಲ್ಲರೂ ಎಣಿಸಿರಬಹುದು. ಆದರೆ, ಅದು ಅಷ್ಟು ಸುಲಭವಾಗಿರಲಿಲ್ಲ. ಈ ಚಿತ್ರಕ್ಕಾಗಿ ನನ್ನ ಮನೆ ಅಡವಟ್ಟಿ. ಡೆಂಗ್ಯುದಿಂದ ಬಳಲಿದೆ. ಬ್ಲಡ್ ಸೆಲ್ ಕೌಂಟ್ ಕಡಿಮೆಯಾಗಿದ್ದರೂ, ಅದರ ಮಧ್ಯೆಯೇ ಚಿತ್ರೀಕರಣ ಮಾಡಿದೆ. ನಾನು ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದರೂ, ಈ ವಿಷಯಗಳನ್ನು ಹೇಳಿಕೊಂಡಿರಲಿಲ್ಲ. ಜನ ನನ್ನ ಬಗ್ಗೆ ಚಿಂತೆ ಮಾಡುವುದು ನನ್ನಗೆ ಇಷ್ಟವಿರಲಿಲ್ಲ. ಹಾಗೆಯೇ, ನಾನು ಸೋಲಲಿ ಎಂದು ಬಯಸುವವರಿಗೆ ಈ ವಿಷಯವನ್ನೆಲ್ಲ ಹೇಳಿ ಖುಷಿಪಡಿಸುವುದಕ್ಕೆ ಇಷ್ಟವಿರಲಿಲ್ಲ' ಎಂದು ಬರೆದುಕೊಂಡಿದ್ದಾರೆ.
'ಒಂದು ವಿಷಯವನ್ನು ನಾನು ಇಲ್ಲಿ ಹೇಳಬೇಕು. ಕಷ್ಟಪಟ್ಟು ಕೆಲಸ ಮಾಡಿದರೆ, ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದಕ್ಕೆ ಮುಂದಾದರೆ, ಯಾರೂ ತಡೆಯುವುದಕ್ಕೆ ಸಾಧ್ಯವಿಲ್ಲ. ನಿಮಗೆ ಯೋಗ್ಯತೆ ಇದ್ದರೆ, ನಿಮ್ಮನ್ನು ಯಾರೂ ಏನೂ ಮಾಡಲಾಗುವುದಿಲ್ಲ. ನನಗೆ ಇದೊಂದು ಹೊಸ ಜನ್ಮ. ಇದನ್ನು ಸಾಧ್ಯವಾಗಿಸಿದ್ದು ನನ್ನ ಪ್ರತಿಭಾವಂತ ತಂಡ. ನನ್ನ ಬಗ್ಗೆ ಕೇರ್ ಮಾಡುವವರು ಹೆದರಬೇಡಿ. ನಾನೀಗ ಸುರಕ್ಷಿತವಾಗಿದ್ದೇನೆ. ನಾನು ಸೇಫ್ ಆಗಿಲ್ಲದಿದ್ದರೆ, ಇದನ್ನೆಲ್ಲ ನಿಮ್ಮ ಜತೆಗೆ ಹಂಚಿಕೊಳ್ಳುತ್ತಲೇ ಇರಲಿಲ್ಲ. ನಿಮ್ಮ ಪ್ರೀತಿ, ಹಾರೈಕೆ ಮತ್ತು ಆಶೀರ್ವಾದ ಸದಾ ಇರಲಿ' ಎಂದು ಹೇಳಿಕೊಂಡಿದ್ದಾರೆ.