ಚೆನ್ನೈ: ಲಾಕ್ಡೌನ್ ಸಮಯದಲ್ಲಿ ಕಳೆದ ಆರೂವರೆ ತಿಂಗಳುಗಳ ಕಾಲ ಹಲವು ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್, ಇದೀಗ 'ತಲೈವಿ' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದು ಗೊತ್ತೇ ಇದೆ. ಈ ವಿಷಯವಾಗಿ ಅವರೇ ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿದ್ದರು. ಚಿತ್ರೀಕರಣಕ್ಕೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದರು.
ಇದೀಗ ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ 'ತಲೈವಿ' ಚಿತ್ರದ ಚಿತ್ರೀಕರಣದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಕಂಗನಾಗೆ ನಿರ್ದೇಶಕ ಎ.ಎಲ್. ವಿಜಯ್ ಮಾಹಿತಿ ನೀಡುತ್ತಿರುವುದನ್ನು ನೋಡಬಹುದಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಮ್ಮ ಚಿತ್ರದ ಪ್ರತಿಭಾವಂತ ನಿರ್ದೇಶಕರಾದ ಎ.ಎಲ್. ವಿಜಯ್ ಅವರ ಜತೆಗಿನ ಕೆಲವು ತುಣುಕುಗಳು. ಜಗತ್ತಿನಲ್ಲಿ ಬಹಳ ಅದ್ಭುತವಾದ ಹಲವು ಜಾಗಗಳಿವೆ. ನನಗೆ ಮಾತ್ರ ಜಗತ್ತಿನಲ್ಲಿ ಅತ್ಯಂತ ಹಿತವಾದ ಮತ್ತು ಆಪ್ಯಾಯಮಾನವಾದ ಜಾಗವೆಂದರೆ ಅದು ಫಿಲ್ಮ್ ಸೆಟ್' ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ನೋಡಿ: ಸಂಭಾವನೆ ಕಡಿಮೆ ಮಾಡಿಕೊಂಡ ಶಾಹೀದ್ … ಹೊಸ ಸಂಭಾವನೆ ಎಷ್ಟು?
'ಥಲೈವಿ' ಚಿತ್ರವು ನಟಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಕುರಿತಾದ ಬಯೋಪಿಕ್ ಆಗಿದ್ದು, ಅವರ ಪಾತ್ರವನ್ನು ಕಂಗನಾ ನಿರ್ವಹಿಸುತ್ತಿದ್ದಾರೆ. ಇನ್ನು ನಟ ಅರವಿಂದ್ ಸ್ವಾಮಿ ಅವರು ಎಂ.ಜಿ. ರಾಮಚಂದ್ರನ್ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.