ಸಿನಿವಾಣಿ

ನನ್ನನ್ನು ಹುಚ್ಚಿ ಅಂತ ಕರೆದರು, ಜೈಲಿಗೆ ಕಳಿಸಲು ಪ್ರಯತ್ನಿಸಿದರು … ಕಂಗನಾ ಅಳಲು

ಮುಂಬೈ: ಸದಾ ಬೇರೆಯವರ ಮೇಲೆ ದೂರುವುದರಲ್ಲಿ ನಂಬರ್​ ಒನ್​ ಎನಿಸಿಕೊಂಡಿರುವ ನಟಿ ಕಂಗನಾ ರಣಾವತ್​ ಮತ್ತೊಮ್ಮೆ ಬಾಲಿವುಡ್​ನವರ ಮೇಲೆ ಹರಿಹಾಯ್ದಿದ್ದಾರೆ. ಬಾಲಿವುಡ್​ ಮಾಫಿಯಾದವರು ತಮ್ಮನ್ನು ಹುಚ್ಚಿ ಅಂತ ಕರೆದರು, ಜೈಲಿಗೆ ಕಳಿಸಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಕಂಗನಾ, 'ಬಾಲಿವುಡ್​ ಮಾಫಿಯಾದವರು ನನ್ನ ವರ್ತನೆಯನ್ನು ದುರಹಂಕಾರ ಎಂದು ಬಿಂಬಿಸಿದರು. ಏಕೆಂದರೆ, ನಾನು ಬೇರೆ ಹುಡಗಿಯರ ಹಲ್ಲು ಕಿರಿಯುವುದಿಲ್ಲ. ಐಟಂ ಡ್ಯಾನ್ಸ್​ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮದುವೆಗಳಲ್ಲಿ ಡ್ಯಾನ್ಸ್​ ಮಾಡುವುದು, ರಾತ್ರಿ ಹೊತ್ತು ಹೀರೋಗಳ ರೂಮುಗಳ ಬಾಗಿಲು ತಟ್ಟುವುದು ಇದ್ಯಾವುದು ಮಾಡುವುದಿಲ್ಲ. ಯಾವಾಗ ಇದೆಲ್ಲದರಿಂದ ನಾನು ದೂರವಿದ್ದೆನೋ, ನನ್ನ ಹುಚ್ಚಿ ಎಂದು ಕರೆದರು. ಜೈಲಿಗೆ ಕಳಿಸುವುದಕ್ಕೆ ಪ್ರಯತ್ನಿಸಿದರು' ಎಂದು ಆರೋಪಿಸಿದ್ದಾರೆ.

ಕಂಗನಾ ಅವರ ಈ ಟ್ವೀಟ್​ಗೆ ಅನುಕುಂಪ ಸಿಗುವುದಕ್ಕಿಂತ ಹೆಚ್ಚಾಗಿ, ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ಚಿತ್ರಗಳ ಬಿಡುಗಡೆಯ ಸಂದರ್ಭದಲ್ಲಿ ಈ ರೀತಿ ಸುಳ್ಳು ಸುದ್ದಿ ಮಾಡಿ, ಜನರಿಂದ ಸಂತಾಪ ಗಿಟ್ಟಿಸುವುದುಕಂಗನಾಗೆ ಅಭ್ಯಾಸವಾಗಿ ಹೋಗಿದೆ ಎಂದು ಹಲವರು ಟೀಕೆ ಮಾಡಿದ್ದಾರೆ.

'ಇದೊಂದು ಹಳೆಯ ತಂತ್ರ. ತಮ್ಮ ಸಿನಿಮಾ ಬಿಡುಗಡೆಯಾಗುವಾಗಲೆಲ್ಲ ಏನೇನೋ ಹೇಳಿ ಜನರಿಂದ ಸಿಂಪತಿ ಗಿಟ್ಟಿಸುವುದು ಹಳೆಯ ಟ್ರಿಕ್​. ಜನ ಸಹ ಇದರಿಂದ ಬೋರ್​ ಆಗಿದ್ದಾರೆ. ಈ ಬಾರಿ ಹೊಸ ತಂತ್ರ ಪ್ರಯತ್ನಿಸಿ ಆಂಟಿ' ಎಂದು ಹಲವರು ಕಂಗನಾ ಕಾಲೆಳೆದಿದ್ದಾರೆ.