ಚೆನ್ನೈ: ಮಲಯಾಳಂನ ಸೂಪರ್ ಹಿಟ್ ಚಿತ್ರ 'ದೃಶ್ಯಂ'ನ ತಮಿಳು ರೀಮೇಕ್ ಆದ 'ಪಾಪನಾಶಂ'ನಲ್ಲಿ ಕಮಲ್ ಹಾಸನ್ ಅಭಿನಯಿಸಿದ್ದು ಗೊತ್ತೇ ಇದೆ. ಈ ರೀಮೇಕ್, ಮೂಲ ಚಿತ್ರದಷ್ಟು ಯಶಸ್ವಿಯೂ ಆಗಲಿಲ್ಲ, ಜನಪ್ರಿಯತೆಯನ್ನೂ ಪಡೆಯಲಿಲ್ಲ.
ಅದಿರಲಿ, ಇದೀಗ 'ಪಾಪನಾಶಂ 2' ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. 'ದೃಶ್ಯಂ 2' ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ, ಸದ್ದಿಲ್ಲದೆ ತೆಲುಗಿನಲ್ಲಿ ರೀಮೇಕ್ ಆಯಿತು. ಕನ್ನಡ ಮತ್ತು ಹಿಂದಿಯಲ್ಲೂ ಚಿತ್ರ ರೀಮೇಕ್ ಆಗುತ್ತಿರುವುದು ಗೊತ್ತಿರುವ ವಿಷಯವೇ. ಹೇಗಿದ್ದರೂ ಮೂರು ಭಾಷೆಗಳಲ್ಲಿ ಚಿತ್ರ ರೀಮೇಕ್ ಆಗುತ್ತಿದೆ, ತಮಿಳಿನಲ್ಲೂ ಆಗಿಬಿಡಲಿ ಎಂದು ನಿರ್ದೇಶಕ ಜೀತು ಜೋಸಫ್ ಯೋಚಿಸಿದ್ದಾರೆ. 'ಪಾಪನಾಶಂ 2' ಮಾಡೋಣ್ವಾ ಎಂದು ಕಮಲ್ ಹಾಸನ್ಗೆ ಸಲಹೆ ಇಟ್ಟಿದ್ದಾರೆ.
ಕಮಲ್ ಹಾಸನ್ ಏನೋ, ಚಿತ್ರ ಮಾಡುವುದಕ್ಕೆ ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಅವರೊಂದು ಕಂಡೀಷನ್ ಹಾಕಿದ್ದಾರೆ. ಅದನ್ನು ಕೇಳಿದ ನಿರ್ದೇಶಕರಿಗೆ ಟೆನ್ಶನ್ ಶುರುವಾಗಿದೆ. ಯೋಚನೆ ಮಾಡ್ತೀವಿ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ. ಇಷ್ಟಕ್ಕೂ ಕಮಲ್ ಹಾಸನ್ ಅವರಿಟ್ಟ ಕಂಡೀಷನ್ ಏನು ಎಂಬ ಪ್ರಶ್ನೆ ಬರಬಹುದು? ಅವರು ನಾಯಕಿಯ ಬದಲಾವಣೆಯ ಬೇಡಿಕೆ ಇಟ್ಟಿದ್ದಾರಂತೆ.
'ಪಾಪನಾಶಂ'ನಲ್ಲಿ ಕಮಲ್ ಪತ್ನಿಯಾಗಿ ಗೌತಮಿ ನಟಿಸಿದ್ದರು. ಈಗ 'ಪಾಪನಾಶಂ 2'ಗೆ ಗೌತಮಿ ಬೇಡ ಎನ್ನುತ್ತಿದ್ದಾರಂತೆ ಕಮಲ್. ಅದಕ್ಕೆ ಕಾರಣವೂ ಇದೆ. ಮೊದಲ ಚಿತ್ರ ಬಂದಿದ್ದು ಆರು ವರ್ಷಗಳ ಹಿಂದೆ. ಆ ಸಂದರ್ಭದಲ್ಲಿ ಅವರಿಬ್ಬರೂ ಅನ್ಯೋನ್ಯವಾಗಿದ್ದರು. ಲಿವ್ಇನ್ ರಿಲೇಶನ್ಶಿಪ್ನಲ್ಲಿ ಇದ್ದರು. ಈಗ ಅವರ ಮಧ್ಯೆ ಸಂಬಂಧ ಹಳಸಿದೆ. ಇಬ್ಬರೂ ಜತೆಯಾಗಿ ನಟಿಸದಷ್ಟು ದೂರವಾಗಿದ್ದಾರೆ. ಹಾಗಾಗಿ, ಗೌತಮಿ ಬೇಡ ಎಂದು ಕಮಲ್ ನೇರವಾಗಿ ಹೇಳಿದ್ದಾರಂತೆ. ಅವರ ಬದಲಿ ಮೀನಾ ಅಥವಾ ಬೇರೆ ಯಾರನ್ನಾದರೂ ಹಾಕಿಕೊಳ್ಳಿ ಎಂದು ಸಲಹೆ ನೀಡಿದ್ದಾರಂತೆ.
ಮೊದಲ ಚಿತ್ರದಲ್ಲಿ ಗೌತಮಿ ಇದ್ದು, ಅದರ ಮುಂದಿನ ಭಾಗದಲ್ಲಿ ಇಲ್ಲ ಎಂದರೆ ಜನ ಏನಂತಾರೆ ಹೇಳಿ? ಈ ಭಯ ನಿರ್ದೇಶಕರಿಗೂ ಇದೆ. ಆದರೆ, ಕಮಲ್ ಹಾಸನ್ ಕೇಳುತ್ತಿಲ್ಲ. ಒಂದು ಪಕ್ಷ ತಾರಾಗಣ ಬದಲಾದರೆ, ಅವರು ನಟಿಸಬಹುದು. ಇಲ್ಲವಾದರೆ, 'ವಿಕ್ರಮ್' ಅಥವಾ 'ಇಂಡಿಯನ್ 2' ಚಿತ್ರದ ಕಡೆ ಹೋಗಬಹುದು ಎಂದು ಹೇಳಲಾಗುತ್ತಿದೆ.