ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ.
ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟಿದೆ. ಲೈಂಗಿಕ ಕಿರುಕುಳ, ಮಹಿಳೆಯರ ಶೌಚಾಲಯಗಳು ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳಂತಹ ಮೂಲಭೂತ ಸೌಲಭ್ಯಗಳ ಕೊರತೆ, ಲಿಂಗ ಪಕ್ಷಪಾತ ಮತ್ತು ತಾರತಮ್ಯ, ಸಂಭಾವನೆಯಲ್ಲಿ ಅಸಮಾನತೆ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಕಾನೂನುಬದ್ಧವಾಗಿ ರಚಿಸಲಾದ ಅಧಿಕಾರದ ನಿಷ್ಕ್ರಿಯೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಈ ವರದಿ ಬೆಳಕು ಚೆಲ್ಲಿದೆ.
ಈ ಸಮಿತಿಯು ತನಿಖೆ ನಡೆಸಿದ ವಿವಿಧ ಘಟನೆಗಳಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಟನೊಂದಿಗೆ ಮತ್ತೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾದಾಗ ಆ ನಟಿ ಅನುಭವಿಸಿದ ಸಂಕಷ್ಟವನ್ನು ವಿವರಿಸಲಾಗಿದೆ. ರಕ್ಷಣೆಯ ದೃಷ್ಟಿಯಿಂದ ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ. ತನಗೆ ಈ ಹಿಂದೆ ಕಿರುಕುಳ ನೀಡಿದ್ದ ನಟನ ಜೊತೆ ಮತ್ತೆ ನಟಿಸಬೇಕಾಗಿತ್ತು. ಆ ಸಿನಿಮಾದಲ್ಲಿ ದಂಪತಿ ಪಾತ್ರ ಮಾಡುತ್ತಿದ್ದೆವು. ಒಂದು ದೃಶ್ಯದಲ್ಲಿ ನನ್ನನ್ನು ತಬ್ಬಿಕೊಳ್ಳಬೇಕಾಗಿತ್ತು. ಈಗಾಗಲೇ ಮಾನಸಿಕ ಮತ್ತು ದೈಹಿಕವಾಗಿ ನೊಂದಿದ್ದ ಕಾರಣ, ಆ ದೃಶ್ಯದಲ್ಲಿ ನಟಿಸಲು ಆಗುತ್ತಿರಲಿಲ್ಲ. ಆದರೆ, ಆ ದೃಶ್ಯವನ್ನು ಲಾಭವಾಗಿ ತೆಗೆದುಕೊಂಡ ನಟ 17 ಟೇಕ್ ತೆಗೆದುಕೊಂಡರು. ಈ ವಿಚಾರದಲ್ಲಿ ನಟನನ್ನು ನಿಂದಿಸದ ನಿರ್ದೇಶಕರು, ನನ್ನನ್ನೇ ಗದರಿದರು ಎಂದು ಹೇಮಾ ಸಮಿತಿಯ ಮುಂದೆ ನಟಿ ಹೇಳಿಕೊಂಡಿದ್ದಾರೆ.
ಮಹಿಳೆಯರು ಸಿನಿಮಾರಂಗಕ್ಕೆ ಬರುವುದು ಹಣ ಮಾಡಲು ಮತ್ತು ಯಾವುದಕ್ಕೂ ಶರಣಾಗುತ್ತಾರೆ ಎಂಬ ಸಾಮಾನ್ಯ ಊಹೆ ಇದೆ. ಹೆಣ್ಣು ಸಿನಿಮಾಗೆ ಬರಲು ಕಲೆ ಮತ್ತು ನಟನೆಯ ಮೇಲೆ ಅವರಿಗಿರುವ ಅಭಿರುಚಿಯೇ ಕಾರಣ ಎಂದು ಸಿನಿಮಾದಲ್ಲಿರುವ ಪುರುಷರು ಊಹಿಸುವುದಿಲ್ಲ. ಖ್ಯಾತಿ ಮತ್ತು ಹಣಕ್ಕಾಗಿ ಬರುತ್ತಾರೆ ಮತ್ತು ಚಲನಚಿತ್ರದಲ್ಲಿ ಅವಕಾಶ ಪಡೆಯಲು ಯಾವುದೇ ವ್ಯಕ್ತಿಯೊಂದಿಗೆ ಮಲಗುತ್ತಾರೆ ಎಂಬ ತಪ್ಪು ಅನಿಸಿಕೆ ಇದೆ ಎಂದು ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್)