ಸಿನಿವಾಣಿ

ಜೂ. ಎನ್​ಟಿಆರ್, ಪ್ರಶಾಂತ್​ ನೀಲ್​ ಕಾಂಬಿನೇಷನ್​ ಸಿನಿಮಾದ ಟೈಟಲ್​ ಫಿಕ್ಸ್!?

ಜೂ. ಎನ್​ಟಿಆರ್​ ಮತ್ತು ಕೆಜಿಎಫ್​ ಖ್ಯಾತಿಯ ನಿರ್ದೇಶಕ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಸಿನಿಮಾ ಮೂಡಿಬರಲಿದೆ ಎಂಬ ಸುದ್ದಿ ಕಳೆದ ಒಂದೂವರೆ ವರ್ಷದಿಂದ ಕೇಳಿಬರುತ್ತಲಿದೆ. ಆದರೆ, ಮಾಸ್​ ಜೋಡಿಯ ಸಿನಿಮಾ ಬಗ್ಗೆ ಇಲ್ಲಿಯವರೆಗೂ ಯಾವುದೇ ಅಪ್​ಡೇಟ್​ ಸಿಕ್ಕಿಲ್ಲ. ಆದರೆ, ಅಭಿಮಾನಿಗಳು ಮಾತ್ರ ಸಂಭ್ರಮದಲ್ಲಿದ್ದಾರೆ. ಏಕೆಂದರೆ, ಆ ಸಿನಿಮಾ ಹೇಗೆಲ್ಲ ಇರಲಿದೆ ಎಂದು ನಿತ್ಯ ಊಹಿಸಿಕೊಳ್ಳುತ್ತಿದ್ದಾರೆ. ಒಂದಲ್ಲ ಒಂದು ಗಾಸಿಪ್​ ಮೂಲಕ ಕೌತುಕ ಹೆಚ್ಚಿಸುತ್ತಿದ್ದಾರೆ. ಇದೀಗ ಈ ಮಾಸ್​ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಚಿತ್ರದ ಹೆಸರೂ ಅಷ್ಟೇ ಕುತೂಹಲ ಮೂಡಿಸಿದೆ. ಅದೇ ‘ರೇಡಿಯೇಷನ್​’!

ಹೌದು, ತಾರಕ್​ ಮತ್ತು ಪ್ರಶಾಂತ್​ ನೀಲ್​ ಜೋಡಿಯ ಚಿತ್ರಕ್ಕೆ ‘ರೇಡಿಯೇಷನ್’ ಎಂಬ ಶೀರ್ಷಿಕೆ ಇಡಲಾಗಿದೆಯೆಂದು ಟಾಲಿವುಡ್​ನಲ್ಲಿ ಸುದ್ದಿ ಹರಿದಾಡುತ್ತಿದೆ. ‘ರೇಡಿಯೇಷನ್​’ ಶೀರ್ಷಿಕೆ ಬಗ್ಗೆ ನಿರ್ದೇಶಕ ಪ್ರಶಾಂತ್​ ಜನ್ಮದಿನದಂದು ಮೈತ್ರಿ ಮೂವಿ ಮೇಕರ್ಸ್​ ಸಂಸ್ಥೆ ಅವರ ಜನ್ಮದಿನದಂದೇ ಸಣ್ಣ ಸುಳಿವು ಬಿಟ್ಟುಕೊಟ್ಟಿತ್ತು. ರೇಷಿಯೇಷನ್ ಸೂಟ್​ನಲ್ಲಿ ಶೀಘ್ರದಲ್ಲಿ ಸಿಗೋಣ ಎಂದು ಟ್ವಿಟ್​ ಮಾಡಿ ಶುಭ ಕೋರಿತ್ತು. ಅದರ ಆಧಾರದ ಮೇಲೆ ಇದೀಗ ಚಿತ್ರದ ಟೈಟಲ್​ ರೇಡಿಯೇಷನ್​ ಎಂಬುದು ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಆದರೆ, ಚಿತ್ರತಂಡ ಮಾತ್ರ ಈವರೆಗೂ ಟೈಟಲ್​ ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.

ಇನ್ನು ಸದ್ಯ ಆರ್​ಆರ್​ಆರ್​ ಸಿನಿಮಾ ಶೂಟಿಂಗ್​ನಲ್ಲಿ ಎನ್​ಟಿಆರ್ ತೊಡಗಿಸಿಕೊಂಡಿದ್ದು, ಇತ್ತ, ಕೆಜಿಎಫ್​ ಚಾಪ್ಟರ್​ 2 ಚಿತ್ರದ ಕೆಲಸಗಳಲ್ಲಿ ಪ್ರಶಾಂತ್​ ಬಿಜಿಯಾಗಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಕೆಜಿಎಫ್​ 2 ಬಿಡುಗಡೆ ಬಳಿಕವೇ ಈ ಜೋಡಿಯ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. (ಏಜೆನ್ಸೀಸ್​)