ಸಿನಿವಾಣಿ

ಪ್ರೈಂ ಮತ್ತು ನಮ್ಮ ಫ್ಲಿಕ್ಸ್​ ಒಟಿಟಿಯಲ್ಲಿ ‘ಜಿಲ್ಕಾ’ ಝಲಕ್ ...

ಬೆಂಗಳೂರು: ಈ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಹಾಸ್ಯಮಯ ಜಿಲ್ಕಾ ಸಿನಿಮಾ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಗಣೇಶ ಹಬ್ಬದ ಪ್ರಯುಕ್ತ ಅಮೆಜಾನ್ ಪ್ರೈಂ ಮತ್ತು ನಮ್ಮ ಫ್ಲಿಕ್ಸ್ ಒಟಿಟಿಯಲ್ಲಿ ಚಿತ್ರ ರಿಲೀಸ್ ಆಗಿದ್ದು, ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಪ್ರಸ್ತುತ ಕಾಲಘಟ್ಟಕ್ಕೆ ಒಪ್ಪುವ ಯುವ ಪೀಳಿಗೆಯನ್ನೇ ಗಮನದಲ್ಲಿಟ್ಟುಕೊಂಡು ನಿರ್ದೇಶಕ ಕಮ್ ನಾಯಕ ಕವೀಶ್ ಶೆಟ್ಟಿ ಜಿಲ್ಕಾ ಸಿನಿಮಾ ಮಾಡಿದ್ದಾರೆ.

ಉಡುಪಿ ಮೂಲದ ಕವೀಶ್ ಶೆಟ್ಟಿ ತಮ್ಮದೆ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈ ಚಿತ್ರದ ಮೂಲಕ ನಾಯಕ ಮತ್ತು ನಿರ್ದೇಶಕನಾಗಿ ಹೊರ ಹೊಮ್ಮಿದ್ದಾರೆ. ಈ ಚಿತ್ರದಲ್ಲಿ ಎರಡು ತಲೆಮಾರುಗಳಲ್ಲಿ ಮನುಷ್ಯನ ಸಂಬಂಧ ಮತ್ತು ಭಾವನೆಗಳಲ್ಲಿ ಉಂಟಾದ ಬದಲಾವಣೆ ಮತ್ತು ಅದರ ಪ್ರಭಾವಗಳನ್ನು ಚಿತ್ರಿಸಲಾಗಿದೆ.

ಪಾತ್ರಕ್ಕೆ ಸಹಜತೆಯನ್ನು ಒದಗಿಸುವ ಕಾರಣಕ್ಕೆ ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ನಾಯಕನ ದೈಹಿಕ ತೂಕವನ್ನು 52, 68 ಮತ್ತು 78 ಕೆಜಿಯಷ್ಟು ತೂಕವನ್ನು ಏರಿಳಿತಗೊಳಿಸಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾ ಹೆಗ್ಡೆ, ಲಕ್ಷ್ಯ ಶೆಟ್ಟಿ, ಗೋಪಿಕಾ ದಿನೇಶ್ ಮುಂತಾದವರು ನಟಿಸಿದ್ದಾರೆ. ಲಾಕ್ಡೌನಿಗೂ ಮುನ್ನ ಥಿಯೇಟರ್ನಲ್ಲಿ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿದ್ದ ಚಿತ್ರ, ಲಾಕ್ಡೌನ್ ಕಾರಣದಿಂದ ಹೆಚ್ಚಿನ ಸಿನಿಮಾ ಪ್ರಿಯರಿಗೆ ನೋಡುವ ಅವಕಾಶ ಸಿಕ್ಕಿರಲಿಲ್ಲ, ಅದೀಗ ಅಮೆಜಾನ್ ಪ್ರೈಮ್ ಮತ್ತು ನಮ್ಮ ಫ್ಲೆಕ್ಸ್ ಮೂಲಕ ನೆರವೇರುತ್ತಿದೆ.