ಬೆಂಗಳೂರು: 'ಜೀವ್ನಾನೇ ನಾಟ್ಕ ಸಾಮಿ' ಎಂಬ ಚಿತ್ರವು ತನ್ನ ವಿಭಿನ್ನ ಶೀರ್ಷಿಕೆಯಿಂದ ಈಗಾಗಲೇ ಹಲವರ ಗಮನಸೆಳೆದಿದೆ. ರಾಜು ಭಂಡಾರಿ ರಾಜಾವರ್ತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಇದೀಗ ನಾಲ್ಕು ಆನ್ಲೈನ್ ಚಿತ್ರೋತ್ಸವಗಳಿಗೆ ಆಯ್ಕೆಯಾಗಿವೆ.
ಇದನ್ನೂ ಓದಿ: ನಾಯಕ-ಖಳನಾಯಕರ ನಡುವಿನ ಖೇಲ್ …
ಪ್ರಮುಖವಾಗಿ ಕೋಲ್ಕತ್ತಾದಲ್ಲಿ ನಡೆದ ಕಲ್ಟ್ ಕ್ರಿಟಿಕ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವುದರ ಜೊತೆಗೆ ಔಟ್ಸ್ಟಾಂಡಿಂಗ್ ಅಚೀವ್ಮೆಂಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕೋಲ್ಕತ್ತಾದಲ್ಲೇ ನಡೆದ ರಬೀಂದ್ರನಾಥ್ ಟ್ಯಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಔಟ್ಸ್ಟಾಂಡಿಂಗ್ ಅಚೀವ್ಮೆಂಟ್ ಪ್ರಶಸ್ತಿ ಪಡೆದಿದೆ. ಇನ್ನು ಲಂಡನ್ನಲ್ಲಿ ನಡೆದ ಲಿಫ್ಟ್ ಆಫ್ ಆನ್ಲೈನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಂತಿಮ ಹಂತದವರೆಗೂ ಹೋದರೆ, ಅಮೇರಿಕಾದ ಮಿಯಾಮಿ ಅಂತಾರಾಷ್ಟ್ರೀಯ ಆನ್ಲೈನ್ ಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡಿದೆ.
'ಜೀವ್ನಾನೇ ನಾಟ್ಕ ಸಾಮಿ' ಚಿತ್ರದ ವಿಶೇಷತೆಯೆಂದರೆ, ಕಿರುತೆರೆಯ ಇಬ್ಬರು ಜನಪ್ರಿಯ ಪ್ರತಿಭೆಗಳು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಕನ್ನಡತಿ' ಧಾರಾವಾಹಿಯ ಕಿರಣ್ ರಾಜ್ ಮತ್ತು ಜೀ ಕನ್ನಡದ 'ಸರಿಗಮಪ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಶ್ರೀಹರ್ಷ, ಈ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಶಸ್ತಿ ಗಳಿಸುವುದು ಈ ಚಿತ್ರದ ಉದ್ದೇಶ ಅಲ್ಲ: ಶಕೀಲಾ
ಇನ್ನು ಅವರ ಜೊತೆಗೆ ಪವಿತ್ರಾ ಕೋಟ್ಯಾನ್, ಅನಿಕಾ ರಮ್ಯಾ, ದೇವ್ ಮುಂತಾದವರು ಅಭಿನಯಿಸಿರುವ ಈ ಚಿತ್ರವನ್ನು ರಾಜು ಭಂಡಾರಿ ರಾಜಾವರ್ತ ನಿರ್ದೇಶನ ಮಾಡಿದರೆ, ಅತೀಶಯ ವೇದಾಂತ ಜೈನ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವು ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.