ಸಿನಿವಾಣಿ

ದೇವಸ್ಥಾನದಲ್ಲಿ ಸರಳವಾಗಿ ಮದ್ವೆಯಾದ್ರಾ ಜಯಂ ರವಿ-ಕೆನಿಶಾ? ವೈರಲ್​ ಫೋಟೋ ಹಿಂದಿನ ರಹಸ್ಯವೇನು? Jayam Ravi

Jayam Ravi : ಕಾಲಿವುಡ್ ಸ್ಟಾರ್​ ದಂಪತಿ ಜಯಂ ರವಿ ಹಾಗೂ ಆರತಿಯ ವಿಚ್ಛೇದನ ಬಹುತೇಕ ಅಂತಿಮವಾಗಿದೆ. ತಮ್ಮ ಬೇರ್ಪಡುವಿಕೆಗೆ ಮೂರನೇ ವ್ಯಕ್ತಿಯೇ ಕಾರಣ ಎಂದು ಆರತಿ ತಮ್ಮ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಆ ಮೂರನೇ ವ್ಯಕ್ತಿ ಬೇರೆ ಯಾರೂ ಅಲ್ಲ, ಗಾಯಕಿ ಕೆನಿಶಾ.

ರವಿ ಮತ್ತು ಕೆನಿಶಾ ಕುರಿತು ತುಂಬಾ ದಿನಗಳ ಹಿಂದೆಯೇ ವದಂತಿಗಳು ಹರಡಲು ಆರಂಭವಾಯಿತು. ಅದಕ್ಕೆ ಪುಷ್ಠಿ ನೀಡುವಂತೆ ರವಿ ಮತ್ತು ಕೆನಿಶಾ ಒಟ್ಟಾಗಿ ಕಾಣಿಸಿಕೊಂಡರು. ಇದೀಗ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ಅದು ಕೂಡ ಇಬ್ಬರು ಹೂಮಾಲೆಗಳನ್ನು ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೂವಿನ ಹಾರಗಳೊಂದಿಗೆ ಕಾಲಿವುಡ್ ಜೋಡಿಯನ್ನು ನೋಡಿದ ನೆಟ್ಟಿಗರು ಶಾಕ್​ ಆಗಿದ್ದಾರೆ. ಅಯ್ಯೋ ಅದೇನದು? ಅವರು ಈಗಷ್ಟೇ ಮದುವೆಯಾಗಿದ್ದಾರಾ? ಕೊನೆಗೂ ಮದುವೆ ಆಗಿಬಿಟ್ರಾ? ಎಂದೆಲ್ಲ ಕಾಮೆಂಟ್​ ಮಾಡುತ್ತಿದ್ದಾರೆ. ಆದರೆ, ನಿಜವಾದ ಕತೆ ಏನೆಂದರೆ, ರವಿ ಮತ್ತು ಕೆನಿಶಾ ತಮಿಳುನಾಡಿನ ಕಾಂಚಿಪುರಂನಲ್ಲಿರುವ ಕುಂದ್ರಾತೂರ್ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದರು.

ದೇವರ ದರ್ಶನದ ನಂತರ, ಕೆನಿಶಾ ಮತ್ತು ಜಯಂ ರವಿ ಪುರೋಹಿತರೊಂದಿಗೆ ಫೋಟೋ ತೆಗೆಸಿಕೊಂಡರು. ಇದೇ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೇವಸ್ಥಾನಕ್ಕೆ ಇಬ್ಬರೇ ಭೇಟಿ ನೀಡಿರುವುದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇಬ್ಬರು ಪ್ರೀತಿಯಲ್ಲಿ ಬಿದ್ದಿರುವುದು ಬಹುತೇಕ ಖಚಿತವಾಗಿದ್ದು, ಇಬ್ಬರು ವೈವಾಹಿಕ ಜೀವನ ಆರಂಭಿಸುವ ಸಾಧ್ಯತೆಯೂ ಇದೆ.

ಅಂದಹಾಗೆ, ಜಯಂ ಚಿತ್ರದ ಮೂಲಕ ರವಿ ಅಪಾರ ಮನ್ನಣೆ ಗಳಿಸಿದರು. ಈ ಚಿತ್ರದ ಮೂಲಕ ಅವರು ಜಯಂ ರವಿ ಎಂದು ಸಿನಿಮಾ ರಂಗದಲ್ಲಿ ನೆಲೆಯೂರಿದರು. ಆದರೆ ಇತ್ತೀಚೆಗೆ, ತನ್ನನ್ನು ಇನ್ಮುಂದೆ ಜಯಂ ರವಿ ಎಂದು ಕರೆಯಬೇಡಿ, ರವಿಮೋಹನ್​ ಎಂದು ಕರೆಯಿರಿ ಎಂದು ಹೆಸರು ಬದಲಾಯಿಸಿಕೊಂಡರು.

ರವಿ ಅವರು 2009 ರಲ್ಲಿ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಪುತ್ರಿ ಆರತಿ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇತ್ತೀಚೆಗೆ, ದಂಪತಿ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ, ಇಬ್ಬರು ಬೇರೆಯಾಗಿದ್ದಾರೆ. ತಮ್ಮ 15 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಲು ಜಯಂ ರವಿ ನಿರ್ಧರಿಸಿದ್ದಾರೆ. ಆದರೆ, ಆರತಿ ಅವರಿಗೆ ಇದು ಇಷ್ಟವಿಲ್ಲ. ಹೀಗಾಗಿ ಇಬ್ಬರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಸದ್ಯ ಈ ಪ್ರಕರಣ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯುತ್ತಿದೆ. ತಮ್ಮ ಪತಿಯಿಂದ ಮಾಸಿಕ 40 ಲಕ್ಷ ರೂ. ಜೀವನಾಂಶವನ್ನು ಕೇಳುತ್ತಿದ್ದಾರೆ. (ಏಜೆನ್ಸೀಸ್​)