ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ನಲ್ಲಿ ಹೊರಗಿನವರು ಮತ್ತು ಸ್ಟಾರ್ ಮಕ್ಕಳ ಕುರಿತಾಗಿ ಚರ್ಚೆ ಜೋರಾಗಿ ನಡೆದಿದ್ದು, ಅದರ ಬಿಸಿ ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ಗೂ ತಟ್ಟಿದೆ.
ಜಾಹ್ನವಿ ಕಪೂರ್ ಅಭಿನಯದ ಎರಡನೇ ಚಿತ್ರ 'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್' ಇದೇ ಆಗಸ್ಟ್ 10ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಅದನ್ನು ಬಾಯ್ಕಾಟ್ ಮಾಡುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವರ್ಗದ ಜನ ತೀರ್ಮಾನಿಸಿದ್ದಾರೆ.
ಅಷ್ಟೇ ಅಲ್ಲ, ಒಂದು ಅಭಿಯಾನವನ್ನೇ ಪ್ರಾರಂಭಿಸಿರುವ ಅವರು, ಜಾಹ್ನವಿ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಜಾಹ್ನವಿಗೆ ಅಭಿನಯ ಬರದಿದ್ದರೂ, ಅಪ್ಪ-ಅಮ್ಮನ ಹೆಸರಿನಲ್ಲಿ ಬದುಕುತ್ತಿದ್ದಾಳೆ ಎಂಬರ್ಥದ ಮಾತುಗಳನ್ನು ಆಡುತ್ತಿದ್ದಾರೆ. ಅಂತಹವರನ್ನು ಬೆಳೆಯುವುದಕ್ಕೆ ಬಿಡಬೇಡಿ ಎಂದು ಕಿಡಿಕಾರುತ್ತಿರುವ ಅವರು, ಚಿತ್ರವನ್ನು ಬಾಯ್ಕಾಟ್ ಮಾಡಿ ಎಂದು ಎಂದು ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಜಾಹ್ನವಿ, 'ಕೆಲವರಿಗೆ ನನ್ನ ಮೇಲೆ ಮತ್ತು ಚಿತ್ರದ ಮೇಲೆ ಯಾವುದೋ ಕಾರಣಕ್ಕೆ ಬೇಸರವಿರಬಹುದು. ಆದರೆ, ನನಗೆ ಚಿತ್ರದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಒಂದೊಳ್ಳೆಯ ಚಿತ್ರವನ್ನ ಮಾಡಿದ್ದೇವೆ ನಾವು. ಆ ಚಿತ್ರದ ಬಗ್ಗೆ ನನಗಷ್ಟೇ ಅಲ್ಲ, ಇಡೀ ಚಿತ್ರತಂಡಕ್ಕೆ ಹೆಮ್ಮೆ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನು ನೆಪೋಟಿಸಂ ಕುರಿತು ಮಾತನಾಡಿರುವ ಅವರು, 'ಬೇರೆಯವರಿಗೆ ಹೋಲಿಸಿದರೆ,ಸ್ಟಾರ್ಗಳ ಮಕ್ಕಳಿಗೆ ಚಿತ್ರರಂಗಕ್ಕೆ ಬರುವುದಕ್ಕೆ ಸುಲಭ. ಹಾಗಂತ ಮುಂದೆಯೇ ಅದೇ ರೀತಿ ಇರುತ್ತದೆ ಎಂದು ಹೇಳುವುದು ಕಷ್ಟ. ನಾನು ಸುಲಭವಾಗಿ ಚಿತ್ರರಂಗಕ್ಕೆ ಬಂದಿರಬಹುದು. ಆದರೆ, ಮುಂದೆ ತುಂಬಾ ಸವಾಲಿದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ' ಎನ್ನುತ್ತಾರೆ ಜಾಹ್ನವಿ.
'ಮುಂದೆ ತುಂಬಾ ಸವಾಲುಗಳಿರುತ್ತವೆ ಮತ್ತು ಆ ಸವಾಲುಗಳನ್ನು ಎದುರಿಸುವುದಕ್ಕೂ ನಾನು ಸಿದ್ಧ. ಈಗಾಗಲೇ ನಾನು ಎರಡು ಚಿತ್ರಗಳಲ್ಲಿ ನಟಿಸಿರಬಹುದು. ಆದರೆ, ನನ್ನ ಚಿತ್ರಜೀವನ ನಿಜಕ್ಕೂ ಶುರುವಾಗುವುದು ಇಲ್ಲಿಂದಲೇ' ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ.