ಸಿನಿವಾಣಿ

'ತೋತಾಪುರಿ' ಯಾವಾಗ ಮುಗಿಯುತ್ತದೋ ಗೊತ್ತಿಲ್ಲ: ಜಗ್ಗೇಶ್​​

manjunathktgns

ಬೆಂಗಳೂರು: ಲಾಕ್​ಡೌನ್​ ಮುಗಿದ ಮೇಲೆ ಜಗ್ಗೇಶ್​, ಇನ್ನೂ ಯಾವೊಂದು ಚಿತ್ರದಲ್ಲೂ ನಟಿಸಿಲ್ಲ. ಅವರ ಮುಂದಿನ ಚಿತ್ರ ಯಾವುದು ಎಂದರೆ 'ರಂಗನಾಯಕ' ಎಂಬ ಉತ್ತರ ಅವರಿಂದ ಬರುತ್ತದೆ.

'ರಂಗನಾಯಕ' ಚಿತ್ರದ ಪತ್ರಿಕಾಗೋಷ್ಠಿ ಕಳೆದ ವರ್ಷವೇ ನಡೆದಿತ್ತು. ಗುರುಪ್ರಸಾದ್​ ನಿರ್ದೇಶನದ ಈ ಚಿತ್ರವು ಈ ವರ್ಷದ ಆರಂಭದಲ್ಲೇ ಆರಂಭವಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಸ್ವಲ್ಪ ಏರುಪೇರಾಗಿದ್ದು, ಚಿತ್ರ ಡಿಸೆಂಬರ್​ ಅಥವಾ ಜನವರಿಯಲ್ಲಿ ಪ್ರಾರಂಭವಾಗುತ್ತದೆ ಎನ್ನುತ್ತಾರೆ ಜಗ್ಗೇಶ್​.

ಇನ್ನು 'ತೋತಾಪುರಿ' ಚಿತ್ರದ ಬಿಡುಗಡೆ ಯಾವಾಗ? ಅದು ಅವರಿಗೂ ಸದ್ಯಕ್ಕೆ ಗೊತ್ತಿಲ್ಲ. ಈ ಚಿತ್ರದ ಬಗ್ಗೆ ಮಾತನಾಡುವ ಅವರು, 'ಇದುವರೆಗೂ 140 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಇನ್ನೂ 45 ದಿನಗಳ ಚಿತ್ರೀಕರಣ ಬಾಕಿ ಇದೆ. ಈಗಾಗಲೇ ಬಜೆಟ್​ 16 ಕೋಟಿ ಆಗಿದೆ. ಅದ್ಯಾವಾಗ ಶುರುವಾಗುತ್ತದೋ, ಯಾವಾಗ ಮುಗಿಯುತ್ತದೋ ಗೊತ್ತಿಲ್ಲ. ನಮ್ಮ ಕರ್ತವ್ಯ ಏನಿದೆ, ಅದನ್ನ ಮುಗಿಸಿ ಹೋಗುತ್ತಿರಬೇಕು. ಅಷ್ಟರಲ್ಲಿ ಇನ್ನೊಂದು ಚಿತ್ರ ಶುರು ಮಾಡಿದರೆ ಇನ್ನೇನಾಗುತ್ತದೆ' ಎಂದು ನಿರ್ದೇಶಕ ವಿಜಯಪ್ರಸಾದ್​ ಅವರ ಹೆಸರು ಎತ್ತದೆಯೇ ಜಗ್ಗೇಶ್​ ಪ್ರಶ್ನಿಸುತ್ತಾರೆ.

ನಿರ್ದೇಶಕ ವಿಜಯಪ್ರಸಾದ್​, 'ಪೆಟ್ರೋಮ್ಯಾಕ್ಸ್​' ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಕೇವಲ 15 ದಿವಸಗಳಲ್ಲಿ ಮುಗಿಸಿದ್ದಾರೆ. ಹೀಗಿರುವಾಗ, 'ತೋತಾಪುರಿ' ಚಿತ್ರವನ್ನು ಇಷ್ಟೇಕೆ ವಿಳಂಬ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಈ ಕುರಿತು ಜಗ್ಗೇಶ್​ ಅವರನ್ನು ಕೇಳಿದರೆ, 'ಆ ಚಿತ್ರಕ್ಕೆ ಅವರೂ ಒಬ್ಬ ನಿರ್ಮಾಪಕರು. ಅಲ್ಲಿ ದುಡ್ಡು ಉಳಿಸಬೇಕಲ್ಲ, ಸಹಜವಾಗಿಯೇ ಬೇಗ ಮುಗಿಯುತ್ತದೆ. ಇಲ್ಲಿ ಬೇರೆ ಯಾರೋ ನಿರ್ಮಾಪಕರು. ಹಾಗಾಗಿ ವಿಳಂಬವಾಗುತ್ತದೆ' ಎಂಬುದು ಅವರ ಅಭಿಪ್ರಾಯ.

'ತೋತಾಪುರಿ' ಶುರುವಾದಾಗ ಎರಡು ಭಾಗಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎಂದು ಯಾರಿಗೂ ಕಲ್ಪನೆ ಇರಲಿಲ್ಲವಂತೆ. ಆದರೆ, ಚಿತ್ರ ಬೆಳೆಯುತ್ತಾ ಬೆಳೆಯುತ್ತಾ ಇದೀಗ ಎರಡು ಚಿತ್ರಗಳಾಗುತ್ತಿವೆಯಂತೆ. 'ಮೊದಲ ಭಾಗ ಸಂಪೂರ್ಣವಾಗದೆ. ಎರಡನೆಯ ಭಾಗದ ಚಿತ್ರೀಕರಣವಷ್ಟೇ ಬಾಕಿ ಇದೆ. ಕೊನೇ ಪಕ್ಷ ಚಿತ್ರದ ಮೊದಲ ಭಾಗವಾದರೂ ಸಂಕ್ರಾಂತಿ ಹೊತ್ತಿಗೆ ಬಿಡುಗಡೆ ಮಾಡಿಬಿಡಿ. ಎರಡನೆಯ ಭಾಗ ನಿಧಾನಕ್ಕೆ ಆಗಲಿ ಎಂದೆ. ಯಾರೂ ನನ್ನ ಮಾತು ಕೇಳಲಿಲ್ಲ' ಎನ್ನುತ್ತಾರೆ ಅವರು.

ಚಿತ್ರ ತಡವಾದರೂ ಅದ್ಭುತವಾಗಿ ಬಂದಿದೆ ಎನ್ನುವುದು ಅವರ ಅಭಿಪ್ರಾಯ. 'ಮೊದಲ ಭಾಗದ ಡಬ್ಬಿಂಗ್​ ಮಾಡಿದೆ. ಚಿತ್ರ ಅದ್ಭುತವಾಗಿ ಬಂದಿದೆ. ಆದರೆ, ಪ್ರಯೋಜನವೇನು? ಬುಟ್ಟಿಯಲ್ಲಿ ಹಾವಿಟ್ಟುಕೊಂಡು ಅಷ್ಟುದ್ಧ ಇದೆ, ಇಷ್ಟುದ್ಧ ಇದೆ ಅಂದರೇನು ಪ್ರಯೋಜನ? ಹೊರಗಡೆ ಬಿಡಬೇಕು ತಾನೇ. ಆಗಷ್ಟೇ ಜನರಿಗೆ ಗೊತ್ತಾಗೋದು' ಎನ್ನುತ್ತಾರೆ ಜಗ್ಗೇಶ್​.

ಹೋಗಲಿ ಶೂಟಿಂಗ್​ ಶುರುವಾದರೆ, ಚಿತ್ರದಲ್ಲಿ ನಟಿಸೋಕೆ ಜಗ್ಗೇಶ್​ ಅವರು ರೆಡಿ ಇದ್ದಾರಾ ಎಂಬ ಪ್ರಶ್ನೆಗೆ, 'ನಾನು ರೆಡಿ ಇದ್ದೆ. ಇನ್ನೆಷ್ಟು ರೆಡಿಯಾಗಲಿ? ಬೈದು ಹೇಳಿದೆ. ಬುದ್ಧಿ ಹೇಳಿದೆ. ಇಲ್ಲ ನಾನಿರೋದೇ ಹೀಗೆ ಎಂದರೆ ನಾನೇನು ಮಾಡಲಿ? ಏನಾದರೂ ಮಾಡಿಕೊಳ್ಳಿ' ಎಂದು ಸುಮ್ಮನಿದ್ದೇನೆ ಎಂಬ ಉತ್ತರ ಅವರಿಂದ ಬರುತ್ತದೆ.