ಸಿನಿವಾಣಿ

‘ಗಾಳಿಪಟ 2’ ತಂಡದೊಂದಿಗೆ ಕಾಣಿಸಿಕೊಂಡ ಜಗ್ಗೇಶ್ ... ಯಾಕಿರಬಹುದು?

ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ರಾಜ್ಯ ಸರ್ಕಾರ ಆದೇಶ ನೀಡುತ್ತಿದ್ದಂತೆ, ಹಲವು ಚಿತ್ರತಂಡಗಳು ಸದ್ದಿಲ್ಲದೆ ಕೆಲಸ ಶುರುಹಚ್ಚಿಕೊಂಡಿವೆ. ಈ ಪೈಕಿ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದ ಡಬ್ಬಿಂಗ್ ಸಹ ಪ್ರಾರಂಭವಾಗಿದೆ. ವಿಶೇಷವೆಂದರೆ, ಈ ಸಂದರ್ಭದಲ್ಲಿ ಹಿರಿಯ ನಟ ಜಗ್ಗೇಶ್ ಕಾಣಿಸಿಕೊಂಡಿದ್ದು.

‘ಗಾಳಿಪಟ 2’ ಚಿತ್ರತಂಡದೊಂದಿಗೆ ಜಗ್ಗೇಶ್ ಕಾಣಿಸಿಕೊಳ್ಳುತ್ತಿದ್ದಂತೆಯೇ ಹಲವು ಊಹಾಪೋಹಗಳು ಎದ್ದಿವೆ. ಈ ಹಿಂದೆ ಯೋಗರಾಜ್ ಭಟ್ ನಿರ್ದೇಶನದ ‘ವಾಸ್ತು ಪ್ರಕಾರ’ ಚಿತ್ರದಲ್ಲಿ ಜಗ್ಗೇಶ್ ಹೀರೋ ಆಗಿದ್ದರು. ಆ ನಂತರ ಮತ್ತೆ ಭಟ್ಟರು ನಿರ್ದೇಶಿಸಿದ ‘ಮುಗುಳು ನಗೆ’ ಚಿತ್ರದಲ್ಲೂ ಇದ್ದರು. ‘ಮುಗುಳು ನಗೆ’ಯ ಹೀರೋ ಗಣೇಶ್ ಆದರೂ, ಜಗ್ಗೇಶ್ ಅತಿಥಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಈಗ ಪುನಃ ‘ಗಾಳಿಪಟ 2’ ಚಿತ್ರದಲ್ಲೂ ಜಗ್ಗೇಶ್ ಅಭಿನಯಿಸುತ್ತಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಬರುವುದು. ಮುಂದೆ ಗೊತ್ತಿಲ್ಲ. ಸದ್ಯಕ್ಕಂತೂ ಜಗ್ಗೇಶ್ ಅವರು ಆ ಚಿತ್ರದಲ್ಲಿ ನಟಿಸಿಲ್ಲ. ‘ಗಾಳಿಪಟ 2’ ತಂಡದವರು ಡಬ್ಬಿಂಗ್ ಮಾಡುತ್ತಿರುವ ವಿಚಾರ ಕೇಳಿ, ಭೇಟಿಯಾಗಿ ಬರೋಣ ಎಂದು ಅವರು ಡಬ್ಬಿಂಗ್ ಸ್ಟುಡಿಯೋಗೆ ಬಂದರಂತೆ. ಅದಕ್ಕೆ ಕಾರಣ ಏನು ಗೊತ್ತಾ? ಅವರಿಗೆ ಒಬ್ಬರೇ ಇದ್ದು ಮಾನಸಿಕ ಒತ್ತಡ ಆಗಿತ್ತಂತೆ.

ಈ ಕುರಿತು ಅವರೇ ವಿವರವಾಗಿ ಟ್ವೀಟ್ ಮಾಡಿದ್ದಾರೆ. ‘ಎರಡು ತಿಂಗಳಿನಿಂದ ನನ್ನ ಯಾವ ಆತ್ಮೀಯರನ್ನೂ ನೋಡದೆ, ಒಬ್ಬನೇ ಇದ್ದು ಸ್ವಲ್ಪ ಮಾನಸಿಕ ಒತ್ತಡ ಆಗಿತ್ತು. ಇಂದು ಭಟ್ಟರ ಚಿತ್ರದ ಡಬ್ಬಿಂಗ್ ನಡೆಯುತಿತ್ತು. ಹಾಗಾಗಿ ಅಲ್ಲಿಗೆ ಹೋಗಿ ಗಣಪ, ದಿಗಂತ, ಭಟ್ಟರು, ಯೋಗಿ ಟೀಮ್ ಸಿಕ್ಕರು. ಮನಸೋ ಇಚ್ಛೆ ಮಾತಾಡಿ, ಮನಸ್ಸು ಹಗುರ ಮಾಡಿಕೊಂಡು ಬಂದೆ. ಜತೆಗೆ ನಮ್ಮನ್ನು ಈ ಸ್ಥಿತಿಗೆ ತಂದ ಕರೊನಾ ಚೈನ್ ಶಪಿಸಿದೆ’ ಎಂದು ಹೇಳಿಕೊಂಡಿದ್ದಾರೆ ಜಗ್ಗೇಶ್.