

ಬೆಂಗಳೂರು: ಸತ್ಯಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ’ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಹಿಂದೆ ‘ಆಟಗಾದರಾ ಶಿವಾ’ ಎಂಬ ಹೆಸರಿನಲ್ಲಿ ತೆಲುಗಿಗೆ ರೀಮೇಕ್ ಆಗಿದ್ದ ‘ರಾಮಾ ರಾಮಾ ರೇ, ಇದೀಗ ಮರಾಠಿಗೆ ರೀಮೇಕ್ ಆಗುವುದರಲ್ಲಿದೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಸತ್ಯಪ್ರಕಾಶ್ ಅವರೇ ಖಚಿತಪಡಿಸಿದ್ದಾರೆ.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಸತ್ಯಪ್ರಕಾಶ್, ‘ಕಳೆದ ತಿಂಗಳು ಲಾಕ್ಡೌನ್ ಪ್ರಯುಕ್ತ ಚಿತ್ರವನ್ನು ಯೂಟ್ಯೂಬ್ನ ಸತ್ಯ ಪಿಕ್ಚರ್ಸ್ ಚಾನಲ್ನಲ್ಲಿ ಅಪ್ಲೋಡ್ ಮಾಡಿದ್ದೆವು. ಒಂದು ತಿಂಗಳಿನಲ್ಲೇ 10 ಲಕ್ಷಕ್ಕೂ ಹೆಚ್ಚು ಜನ ಚಿತ್ರವನ್ನು ನೋಡಿದ್ದಾರೆ. ಮರಾಠಿ ನಿರ್ಮಾಣ ಸಂಸ್ಥೆಯೊಂದು ಚಿತ್ರವನ್ನು ನೋಡಿ ಮೆಚ್ಚುಕೊಂಡಿದ್ದಷ್ಟೇ ಅಲ್ಲ, ಚಿತ್ರವನ್ನು ಮರಾಠಿಗೆ ರೀಮೇಕ್ ಮಾಡುವುದಕ್ಕೆ ಮುಂದೆ ಬಂದಿದೆ’ ಎನ್ನುತ್ತಾರೆ ಸತ್ಯ. ಈಗಾಗಲೇ ಚಿತ್ರದ ಕೆಲಸಗಳು ಪ್ರಾರಂಭವಾಗಿದ್ದು, ಲಾಕ್ಡೌನ್ ಮುಗಿದ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುವ ಸತ್ಯಪ್ರಕಾಶ್, ‘ಚಿತ್ರಕಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇನ್ನು ಕರ್ನಾಟಕ-ಮಹಾರಾಷ್ಟ್ರ ಬಾರ್ಡರ್ನಲ್ಲೇ ಹೆಚ್ಚಾಗಿ ಚಿತ್ರೀಕರಣ ಮಾಡಿರುವುದರಿಂದ, ಇಲ್ಲೇ ಚಿತ್ರೀಕರಣ ಮಾಡುವ ಯೋಚನೆ ಅವರದ್ದು. ಅಗತ್ಯವಿರುವ ಸಹಕಾರವನ್ನು ಅವರು ಕೇಳಿದ್ದಾರೆ. ಈಗಾಗಲೇ ಆ ತಂಡದವರು ಪ್ರೀ-ಪ್ರೊಡಕ್ಷನ್ ಕೆಲಸ ಶುರು ಮಾಡಿದ್ದು, ಲಾಕ್ಡೌನ್ ಮುಗಿದು ಚಿತ್ರೀಕರಣ ಚಟುವಟಿಕೆಗಳೆಲ್ಲಾ ಪ್ರಾರಂಭವಾದ ನಂತರ ಚಿತ್ರೀಕರಣ ಆರಂಭಿಸುವ ಸಾಧ್ಯತೆ ಇದೆ’ ಎನ್ನುತ್ತಾರೆ.