ಲೋಕೇಶ್ ಕನಗರಾಜ್ ಆ್ಯಕ್ಷನ್-ಕಟ್ ಹೇಳುತ್ತಿರುವ ವಿಜಯ್ ದಳಪತಿ ಅಭಿನಯದ ಸಿನಿಮಾ ‘ಲಿಯೊ’. ಬಾಲಿವುಡ್ ನಟ ಸಂಜಯ್ ದತ್ತ್, ತ್ರಿಶಾ, ಅರ್ಜುನ್ ದಾಸ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.
ಅ. 19ಕ್ಕೆ ಚಿತ್ರ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಚಿತ್ರತಂಡ ದಿನಕ್ಕೊಂದರಂತೆ ಒಂದೊಂದು ಭಾಷೆಯ ಪೋಸ್ಟರ್‌ಗಳನ್ನು ರಿಲೀಸ್ ಮಾಡುತ್ತಿದೆ. ಪ್ರತಿಯೊಂದು ಪೋಸ್ಟರ್‌ನಲ್ಲು ಬೇರೆ ಬೇರೆ ಬರಹಗಳಿದ್ದು, ಸಿನಿಮಾದ ಬಗ್ಗೆ ಕುತೂಹಲ ಮೂಡಿಸುವ ಪ್ರಯತ್ನದಲ್ಲಿದೆ ಚಿತ್ರತಂಡ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಇಷ್ಟೊಂದು ಹೈಪ್ ನೀಡುವ ಅವಶ್ಯಕತೆ ಇದೆಯೇ? ಇದು ಓವರ್ ಹೈಪ್ ಆಯಿತು ಎಂದೆಲ್ಲ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಕೇರಳದಲ್ಲಿ ಈ ಸಿನಿಮಾದ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಹಿಂದೆ ವಿಜಯ್ ಹಾಗೂ ಮಲಯಾಳಂ ನಟ ಮೋಹನ್‌ಲಾಲ್ ಕಾಂಬಿನೇಷನ್‌ನ ‘ಜಿಲ್ಲಾ’ ಸಿನಿಮಾ ಬಿಡುಗಡೆಯಾದಾಗ, ಮೋಹನ್‌ಲಾಲ್ ಅಭಿಮಾನಿಗಳು ವಿಜಯ್ ಅಭಿನಯದ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಯೆ ನೀಡಿದ್ದರು. ಅದರಿಂದ ವಿಜಯ್ ಅಭಿಮಾನಿಗಳು ಕೋಪಗೊಂಡು ಸಾಮಾಜಿಕ ಜಾಲತಾಣದಲ್ಲಿ ಮೋಹನ್‌ಲಾಲ್ ಹಲವಾರು ಸಿನಿಮಾಗಳ ಬಗ್ಗೆ ಬೈದು ಬರೆದಿದ್ದರು. ಈ ಕಾರಣದಿಂದ ಈಗ ಟ್ವಿಟರ್‌ನಲ್ಲಿ ಹಾಶ್‌ಟ್ಯಾಗ್ ಕೇರಳ ಬಾಯ್‌ಕಾಟ್ ಲಿಯೊ ಟ್ರೆಂಡ್ ಆಗುತ್ತಿದ್ದು, ವಿಜಯ್ ಅಭಿನಯದ ಸಿನಿಮಾವನ್ನು ಕೇರಳದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದೆಲ್ಲ ಬರೆದಿದ್ದಾರೆ. -ಏಜೆನ್ಸೀಸ್