ಸಿನಿವಾಣಿ

ಅಕ್ಷಯ್​ಗೆ ಮೋದಿ ಸರ್ಕಾರ ಅಂದ್ರೆ ಭಯಾನಾ?

ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿವ ಹೀರೋಗಳು, ನಿಜಜೀವನದಲ್ಲಿ ಅಷ್ಟೇನೂ ಧೈರ್ಯವಂತರಾಗಿರುವುದಿಲ್ಲ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳು ಸಿಗುತ್ತವೆ ಮತ್ತು ಎಲ್ಲಾ ಸ್ಟಾರ್ ಹೀರೋಗಳಿಗೂ ನಿಜಜೀವನದಲ್ಲಿ ಒಂದಲ್ಲಾ ಒಂದು ಭಯವಿದ್ದೇ ಇರುತ್ತದೆ.

ಇಂಥದ್ದೊಂದು ಪ್ರಶ್ನೆ ಬರುವುದಕ್ಕೆ ಮುಖ್ಯ ಕಾರಣ ಬಾಲಿವುಡ್​ ನಟ ಅಕ್ಷಯ್​ ಕುಮಾರ್​. ಮನಮೋಹನ್​ ಸಿಂಗ್​ ಅವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ, ಪೆಟ್ರೋಲ್ ಮತ್ತು ಡೀಸಲ್​ ದರಗಳಲ್ಲಿ ಭಾರೀ ಹೆಚ್ಚಳವಾಗಿತ್ತು. ಈ ಕುರಿತು ಅಕ್ಷಯ್​ ಕುಮಾರ್​ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಟ್ವಿಟರ್​ನಲ್ಲಿ ಈ ದರ ಏರಿಕೆಯ ಬಗ್ಗೆ ಖಂಡಿಸಿದ್ದರು.

ಈಗ ಮತ್ತೊಮ್ಮೆ ಪೆಟ್ರೋಲ್​, ಡೀಸಲ್​ ಮತ್ತು ಗ್ಯಾಸ್​ ದರದಲ್ಲಿ ಭಾರೀ ಹೆಚ್ಚಳವಾಗಿದೆ. ಆದರೆ, ಅಕ್ಷಯ್​ ಕುಮಾರ್​ ಮಾತ್ರ ಚಕಾರವೆತ್ತಿಲ್ಲ. ಹಾಗಾಗಿ ಅಕ್ಷಯ್​ ಕುಮಾರ್​ಗೆ ಮೋದಿ ಸರ್ಕಾರವೆಂದರೆ ಭಯವಾ ಎಂದು ಮಹಾರಾಷ್ಟ್ರದ ಸಚಿವ ಜಿತೇಂದ್ರ ಅಹ್ವಾದ್​ ಪ್ರಶ್ನಿಸಿದ್ದಾರೆ.

ಮೂಲತಃ ಎನ್​.ಸಿ.ಪಿಯವರಾದ ಜಿತೇಂದ್ರ ಅಹ್ವಾದ್​, ಪೆಟ್ರೋಲ್​ ಮತ್ತು ಡೀಸಲ್​ ಬೆಲೆ ಹೆಚ್ಚಳದ ಬಗ್ಗೆ ಅಕ್ಷಯ್​ ಕುಮಾರ್​ ಯಾವುದೇ ಪ್ರತಿಕ್ರಿಯೆ ನೀಡದಿರುವ ಬಗ್ಗೆ ಕಿಡಿಕಾರಿದ್ದಾರೆ. 'ಮಿಸ್ಟರ್​ ಕುಮಾರ್​, ನೀವು ಟ್ವಿಟರ್​ನಲ್ಲಿ ಸಕ್ರಿಯವಾಗಿಲ್ಲವಾ? ಕಾರ್​ನಲ್ಲಿ ಪ್ರಯಾಣ ಮಾಡುತ್ತಿಲ್ಲವಾ? ಅಥವಾ ಪತ್ರಿಕೆಗಳನ್ನು ಓದುವುದನ್ನು ಬಿಟ್ಟುಬಿಟ್ಟಿದ್ದೀರಾ?' ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ, ಅಕ್ಷಯ್​ ಕುಮಾರ್​ ಮೋದಿ ಸರ್ಕಾರದ ವಿರುದ್ಧ ಪ್ರಶ್ನೆ ಎತ್ತುವುದಕ್ಕೆ ಭಯವಾ ಎಂದು ಪರೋಕ್ಷವಾಗಿ ಕೇಳಿದ್ದಾರೆ.

ಅಕ್ಷಯ್​ ಕುಮಾರ್​ ಹೇಗೆ ಬೆಲೆ ಹೆಚ್ಚಳದ ಬಗ್ಗೆ ಮೌನವಾಗಿದ್ದಾರೋ, ಅದೇ ರೀತಿ ಜಿತೇಂದ್ರ ಅಹ್ವಾದ್​ ಅವರು ಹಾಕಿರುವ ಪ್ರಶ್ನೆಗಳಿಗೂ ಅದೇ ಮೌನವನ್ನು ಮುಂದುವರೆಸಿದ್ದಾರೆ. ಇದುವರೆಗೂ ಜಿತೇಂದ್ರ ಅವರ ಪ್ರಶ್ನೆಗಳಿಗೆ ಉತ್ತರಿಸದ ಅಕ್ಷಯ್​, ಈ ವಿವಾದದಿಂದ ದೂರವುಳಿದಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ, ಮೋದಿ ಸರ್ಕಾರದ ಕುರಿತು ಅಕ್ಷಯ್​ ಕುಮಾರ್​ ಯಾವತ್ತೂ ಮೃದು ಧೋರಣೆಯನ್ನು ತೋರಿಸುತ್ತಲೇ ಬಂದಿದ್ದಾರೆ. ಹಾಗಾಗಿ ಅವರು ಪೆಟ್ರೋಲ್​ ಮತ್ತು ಡೀಸಲ್​ ಬೆಲೆ ಹೆಚ್ಚಳದ ಕುರಿತು ಯಾವುದೇ ಪ್ರತಿಕ್ರಿಯೆ ನೀಡದಿರಬಹುದು.

ಮೃದು ಧೋರಣೆಯೇನೋ ಓಕೆ, ಅಕ್ಷಯ್​ಗೆ ಮೋದಿ ಸರ್ಕಾರ ಅಂದ್ರೆ ಭಯಾನಾ? ಈ ಪ್ರಶ್ನೆಗೆ ಅವರೇ ಉತ್ತರಿಸಬೇಕು.