ಸಿನಿವಾಣಿ

ಖ್ಯಾತ ನಟ ಲೈಂಗಿಕ ದೌರ್ಜನ್ಯ ಎಸಗಿದ ಹೋಟೆಲ್​ ರೂಮ್​ ತೋರಿಸಿದ ನಟಿ! ಪೊಲೀಸರಿಗೆ ಸಿಕ್ತು ಸಾಕ್ಷ್ಯ

ತಿರುವನಂತಪುರಂ: ಕೇರಳದಲ್ಲಿ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಕರಾಳ ಮುಖ ಒಂದೊಂದಾಗಿ ಕಳಚಿಕೊಳ್ಳತ್ತಿದೆ. ಅನೇಕ ನಟಿಯರು ತಾವು ಎದುರಿಸಿದ ಕಹಿ ಘಟನೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಅನೇಕ ನಟರ ವಿರುದ್ಧ ದೂರು ಸಹ ದಾಖಲಾಗಿದ್ದು, ಪೊಲೀಸ್​ ತನಿಖೆ ಆರಂಭವಾಗಿದೆ.

ನಟ ಸಿದ್ದಿಕ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸಲು ತಿರುವನಂತಪುರದ ಮ್ಯಾಸ್ಕಾಟ್ ಹೋಟೆಲ್‌ಗೆ ಪೊಲೀಸರು ಭಾನುವಾರ (ಸೆ.01) ಭೇಟಿ ನೀಡಿದರು. ಈ ವೇಳೆ ದೂದುದಾರೆ ಅಥವಾ ಸಂತ್ರಸ್ತೆ ನಟಿ ತನಿಖಾ ಅಧಿಕಾರಿಗಳಿಗೆ ಹೋಟೆಲ್​ ರೂಮ್​ ಅನ್ನು ತೋರಿಸಿದರು. 2016ರ ಜನವರಿ 28ರಂದು 101-ಡಿ ರೂಮಿನಲ್ಲಿ ಸಿದ್ದಿಕ್ ತಂಗಿರುವುದು ದೃಢಪಟ್ಟಿದೆ. ದೂರುದಾರೆಯ ಜತೆ ಹೊಟೇಲ್​ಗೆ ಬಂದಿದ್ದ ಸ್ನೇಹಿತನ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ.

ಆರೋಪ ನಿಜವೇ ಎಂದು ತಿಳಿದುಕೊಳ್ಳಲು ಘಟನೆಯ ಸಮಯದಲ್ಲಿ ಸಿದ್ದಿಕ್ ತಿರುವನಂತಪುರಂನ ಮ್ಯಾಸ್ಕಾಟ್ ಹೋಟೆಲ್‌ನಲ್ಲಿದ್ದರು ಎಂದು ಪೊಲೀಸರು ದಾಖಲೆಗಳ ಮೂಲಕ ಖಚಿತ ಪಡಿಸಿಕೊಂಡರು. ತಿರುವನಂತಪುರಂನಲ್ಲಿ ನಡೆದ ಸಿನಿಮಾವೊಂದರ ಶೂಟಿಂಗ್​ ವೇಳೆ ನಟಿಯ ಜೊತೆಯಲ್ಲಿ ಸಿದ್ದಿಕ್ ಹೋಟೆಲ್​ ರೂಮಿಗೆ ಭೇಟಿ ನೀಡಿರುವುದು ದೃಢಪಟ್ಟಿದೆ.

ನಟ ಸಿದ್ದಿಕ್​ ಇನ್ನು ಅನೇಕ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಶಂಕೆ ವ್ಯಕ್ತವಾಗಿದೆ. ಸಾಕಷ್ಟು ಕಲಾವಿದೆಯರು ಸಿದ್ದಿಕ್​ ವಿರುದ್ಧ ಆರೋಪ ಮಾಡಿದ್ದು, ಸಿದ್ದಿಕ್​ಗೆ ಬಂಧನ ಭೀತಿ ಎದುರಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ದೌರ್ಜನ್ಯಕ್ಕೆ ಒಳಗಾದವರಿಂದ ಹೇಳಿಕೆ ಪಡೆದು, ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ.

ಏನಿದು ಹೇಮಾ ಸಮಿತಿ ವರದಿ?

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್​)