ಸಿನಿವಾಣಿ

ಯಾರೂ ಮಾಡದ್ದನ್ನ ಮಾಡಿದ ದುನಿಯಾ ವಿಜಯ್ ಅಭಿಮಾನಿ ...

manjunathktgns

ಬೆಂಗಳೂರು: 'ದುನಿಯಾ' ವಿಜಯ್​ ಅಭಿನಯದ ಮತ್ತು ಮೊದಲ ಬಾರಿಗೆ ನಿರ್ದೇಶಿಸಿರುವ 'ಸಲಗ' ಚಿತ್ರವು 2021ರ ಫೆಬ್ರವರಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ವಿಜಯ್​ ಅವರ ಅಭಿಮಾನಿಯೊಬ್ಬ ಯಾರೂ ಮಾಡದ್ದನ್ನು ಮಾಡಿ ತೋರಿಸಿದ್ದಾನೆ.

ಇಷ್ಟಕ್ಕೂ ವಿಜಯ್​ ಅಭಿಮಾನಿ ಅಂಥದ್ದೇನು ಮಾಡಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜ. ಇದೇ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಶಾಸನ ರಚಿಸಿರುವ ಅವರು, ಪುರಾತನ ಶಿಲಾಶಾಸನದ ಮಾದರಿಯಲ್ಲಿ 'ಸಲಗ' ಶಾಸನ ರಚಿಸಿದ್ದಾರೆ.

ಆಶ್ಚರ್ಯವಾಗಬಹುದು. ಆದರೂ ಇದು ನಿಜ. ವಿಜಯ್​ ಅವರ ಅಭಿಮಾನಿ ಗಿರೀಶ್​ ಆಚಾರ್​ ಎನ್ನುವವರು 'ಸಲಗ' ಶತದಿನದ ಸಂಭ್ರಮದ ಶಾಸನ ಬರೆದು ಚಿತ್ರತಂಡಕ್ಕೆ ಸರ್ಪೈಸ್ ಗಿಫ್ಟ್ ಆಗಿ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಯಾವುದೇ ಹಳೆಯ ದೇವಸ್ಥಾನಕ್ಕೆ ಹೋದರೂ, ಅಲ್ಲಿ ಶಾಸನಗಳನ್ನು ನೋಡಬಹುದು. ಶಾಸನಗಳು ಇತಿಹಾಸ ಸೃಷ್ಟಿ ಮಾಡುತ್ತದೆ. 'ಸಲಗ' ನೂರು ದಿನ ಓಡುತ್ತದೆ ಎಂಬ ನಂಬಿಕೆ ಇದೆ. ಅದೇ ಕಾರಣಕ್ಕೆ, 'ಸಲಗ' ನೂರು ದಿನ ಓಡಿದ ಶಾಸನವನ್ನು ಮಾಡಿದ್ದೇನೆ' ಎನ್ನುತ್ತಾರೆ ಗಿರೀಶ್​.

'ದುನಿಯಾ' ವಿಜಯ್ ನಿರ್ದೇಶಿಸಿ ನಟಿಸಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ, ಸಂಜನಾ ಆನಂದ್ ಪ್ರಮುಖ‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನಕಪುರ ಶ್ರೀಕಾಂತ್​ ಈ ಚಿತ್ರವನ್ನು ನಿರ್ಮಿಸಿದ್ದಾರೆ.