ಡ್ಯೂಪ್​ ಇಲ್ಲದೆಯೇ ಹೊಡೆದಾಡುತ್ತಿದ್ದಾರಂತೆ ಸಂಜಯ್​ ದತ್​!

KGF 2 - Final
Published on

ಹೈದರಾಬಾದ್​: ಯಶ್​ ಅಭಿನಯದ 'ಕೆಜಿಎಫ್​ - ಚಾಪ್ಟರ್​ 2' ಚಿತ್ರದ ಕ್ಲೈಮ್ಯಾಕ್ಸ್​ ಫೈಟ್​ನ ಚಿತ್ರೀಕರಣ ಹೈದರಾಬಾದ್​ನಲ್ಲಿ ಭರದಿಂದ ಸಾಗಿದೆ. ಚಿತ್ರತಂಡದವರು ಯಶ್​ ಮತ್ತು ಸಂಜಯ್​ ದತ್​ ನಡುವಿನ ಕೊನೆಯ ಫೈಟ್​ ಚಿತ್ರೀಕರಣ ಮಾಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಲಿದೆ.

ವಿಶೇಷವೆಂದರೆ, 'ಅಧೀರ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜಯ್ ದತ್​, ಈ ಫೈಟ್​ನಲ್ಲಿ ಡ್ಯೂಪ್​ ಬಳಸುತ್ತಿಲ್ಲವಂತೆ. ಸಂಜಯ್ ದತ್​ ಅವರು ಮುಂಚಿನಿಂದಲೂ ತಮ್ಮ ಫೈಟ್​ಗಳನ್ನು ತಾವೇ ಮಾಡಿಕೊಂಡು ಬರುತ್ತಿದ್ದರು. ಬಹುತೇಕ ಚಿತ್ರಗಳಲ್ಲಿ ಡ್ಯೂಪ್​ಗಳ ಮೊರೆ ಹೋಗದೆ, ತಾವೇ ಸ್ವತಃ ಸ್ಟಂಟ್​ ಮಾಡುತ್ತಿದ್ದರು. ಈಗಲೂ ಅದನ್ನು ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.

ಗಣಿಯಲ್ಲಿ ನಡೆಯುವ ಫೈಟ್​ ಇದಾಗಿದ್ದು, ರಾಕಿ ಭಾಯ್​ ಮತ್ತು ಅಧೀರ ಈ ಫೈಟ್​ನಲ್ಲಿ ಮುಖಾಮುಖಿಯಾಗುತ್ತಾರಂತೆ. ಆ ನಂತರ ಏನಾಗುತ್ತದೆ ಎಂಬುದು ಸಸ್ಪೆನ್ಸ್​. ಆದರೆ, ಚಿತ್ರತಂಡದವರು ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ದತ್​ ಅವರ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಫೋಟೋಗಳಲ್ಲಿ ಸಂಜಯ್​ ದತ್​ ಅವರ ಮುಖ ಕಾಣದಿದ್ದರೂ, ಅಧೀರ ಗೆಟಪ್​ನಲ್ಲಿರುವುದರಿಂದ, ಅವರೇ ಎಂದು ನಂಬಬೇಕು.

'ಕೆಜಿಎಫ್​ 2' ಚಿತ್ರದಲ್ಲಿ ಯಶ್​, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್​, ಸಂಜಯ್​ ದತ್​ ಮುಂತಾದವರು ನಟಿಸಿದ್ದು, ಪ್ರಶಾಂತ್​ ನೀಲ್​ ಅವರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಂಸ್​ನಡಿ ವಿಜಯ್​ಕುಮಾರ್​ ಕಿರಗಂದೂರು ನಿರ್ಮಿಸುತ್ತಿರುವ ಈ ಚಿತ್ರದ ಟೀಸರ್​, ಯಶ್​ ಹುಟ್ಟುಹಬ್ಬಕ್ಕೆ (ಜನವರಿ 08) ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net