ಸಿನಿವಾಣಿ

ತಲೆಯಲ್ಲಿ ಮಲ್ಲಿಗೆ ಇಲ್ಲ, ನಾನು ಖಂಡಿತ ಆಸ್ಟ್ರೇಲಿಯಾದಲ್ಲಿಲ್ಲ: ಇನ್ನೂ ಆ ಘಟನೆ ಮರೆತಿಲ್ಲ ನವ್ಯಾ​! Navya Nair

ಕೊಚ್ಚಿ: ನಟಿ ನವ್ಯಾ ನಾಯರ್ ( Navya Nair )​ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಟ ದರ್ಶನ್​ ಅಭಿನಯದ ಸೂಪರ್​ ಹಿಟ್​ ಗಜ ಸಿನಿಮಾದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಅಲ್ಲದೆ, ನಮ್ಮೆಜಮಾನ್ರು, ಭಾಗ್ಯದ ಬಳೆಗಾರ, ಬಾಸ್​ ಹಾಗೂ ದೃಶ್ಯ 1 ಮತ್ತು 2 ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ತುಂಬಾ ಹತ್ತಿರವಾಗಿದ್ದಾರೆ.

ತಾಜಾ ಸಂಗತಿ ಏನೆಂದರೆ, ನವ್ಯಾ ಅವರು ತಮ್ಮ ಗ್ಯಾಲರಿಯಿಂದ ಒಂದಿಷ್ಟು ಹಳೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ನವ್ಯಾ ಅವರು ವಿಮಾನದೊಳಗೆ ಕುಳಿತಿರುವ ಫೋಟೋ ಕೂಡ ಒಂದು. ಈ ಫೋಟೋವನ್ನು ಯಾವಾಗ ತೆಗೆಯಲಾಯಿತು ಎಂಬುದು ನನಗೆ ನೆನಪಿಲ್ಲ ಎಂದು ಸ್ವತಃ ನವ್ಯಾ ಅವರೇ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಆಸ್ಟ್ರೇಲಿಯಾದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡ ನವ್ಯಾ, ಇದು ಖಂಡಿತ ಆಸ್ಟ್ರೇಲಿಯಾಕ್ಕೆ ಹೋದಾಗ ತೆಗೆದ ಫೋಟೋಗಳಂತು ಅಲ್ಲ ಎಂದಿದ್ದಾರೆ. ನೀವು ಎಲ್ಲಿದ್ದೀರಿ ಎಂದು ನನ್ನ ಪ್ರಶ್ನಿಸುತ್ತೀರಿ. ನನ್ನ ತಲೆಯ ಮೇಲೆ ಮಲ್ಲಿಗೆ ಹೂವು ಇಲ್ಲದ ಕಾರಣ ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಲ್ಲ ಎಂಬುದು ಖಚಿತ ಎನ್ನುವ ಮೂಲಕ ನವ್ಯಾ ನಗೆ ಚಟಾಕಿ ಹಾಕಿದ್ದಾರೆ.

ಏನಿದು ಮಲ್ಲಿಗೆ ಘಟನೆ?

ಈ ಹಿಂದೆ ಮಲ್ಲಿಗೆ ಹೂವುಗಳನ್ನು ತೆಗೆದುಕೊಂಡು ಬಂದಿದ್ದಕ್ಕಾಗಿ ನವ್ಯಾ ನಾಯರ್ ಅವರಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಮೊತ್ತದ ದಂಡ ವಿಧಿಸಲಾಗಿತ್ತು. ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಮಲಯಾಳಿ ಸಂಘ ಓಣಂ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು. ಸ್ವತಃ ನವ್ಯಾ ಅವರೇ ಇದನ್ನು ಬಹಿರಂಗಪಡಿಸಿದ್ದರು. ತಮ್ಮ ಬ್ಯಾಗ್‌ನಲ್ಲಿದ್ದ 15 ಸೆಂಟಿಮೀಟರ್ ಉದ್ದದ ಮಲ್ಲಿಗೆ ಹೂವಿಗೆ 1,980 ಡಾಲರ್​ ಅಂದರೆ, ಸುಮಾರು ರೂ. 1 ಲಕ್ಷ ರೂಪಾಯಿ ದಂಡ ಪಾವತಿಸಿದ್ದೇನೆ ಎಂದಿದ್ದರು.

ಓಣಂ ಕಾರ್ಯಕ್ರಮದಲ್ಲಿ ಮಾತನಾಡಿದ ನವ್ಯಾ, ಮಲ್ಲಿಗೆ ಹೂವುಗಳನ್ನು ವಿಮಾನದಲ್ಲಿ ಕೊಂಡೊಯ್ಯುವುದನ್ನು ನಿಷೇಧಿಸಿರುವ ಕಾನೂನಿನ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ಇಲ್ಲಿಗೆ ಬರುವ ಮೊದಲು ನನ್ನ ತಂದೆ ನನಗೆ ಮಲ್ಲಿಗೆಯನ್ನು ಖರೀದಿಸಿದರು. ಅವರು ಅದನ್ನು ಎರಡು ತುಂಡುಗಳಾಗಿ ಕತ್ತರಿಸಿ ನನಗೆ ಕೊಟ್ಟರು. ನನ್ನ ತಂದೆ ಕೊಚ್ಚಿಯಿಂದ ಸಿಂಗಾಪುರಕ್ಕೆ ನನ್ನ ಕೂದಲಿನಲ್ಲಿ ಒಂದು ತುಂಡನ್ನು ಧರಿಸಲು ಹೇಳಿದರು. ಸಿಂಗಾಪುರದಲ್ಲಿ ಎರಡನೇ ತುಂಡನ್ನು ಧರಿಸಿ, ನನ್ನ ಕೈಚೀಲದಲ್ಲಿ ಇಡಲು ಹೇಳಿದರು. ನಾನು ಮಲ್ಲಿಗೆಯನ್ನು ಕ್ಯಾರಿ-ಆನ್ ಬ್ಯಾಗ್‌ನಲ್ಲಿ ಇರಿಸಿ ನನ್ನ ಕೈಚೀಲದಲ್ಲಿ ಇರಿಸಿದೆ. ಆದರೆ, ಅದು ಕಾನೂನುಬಾಹಿರ ಎಂದು ನನಗೆ ತಿಳಿದಿರಲಿಲ್ಲ. 15 ಸೆಂಟಿಮೀಟರ್ ಮಲ್ಲಿಗೆಯನ್ನು ತಂದಿದ್ದಕ್ಕಾಗಿ ಅಧಿಕಾರಿಗಳು ನನಗೆ $1,980 ದಂಡವನ್ನು ಪಾವತಿಸಲು ಕೇಳಿದರು. ಅದು ತಪ್ಪು ಎಂದು ನನಗೆ ತಿಳಿದಿದೆ. ಆದರೆ ಅದು ಉದ್ದೇಶಪೂರ್ವಕವಾಗಿರಲಿಲ್ಲ. 28 ದಿನಗಳಲ್ಲಿ ನಾನು ದಂಡವನ್ನು ಪಾವತಿಸಬೇಕೆಂದು ಹೇಳಿದರು ಎಂದು ನವ್ಯಾ ಹೇಳಿದರು.

ಅಂದಹಾಗೆ, 2015ರಲ್ಲಿ ಆಸ್ಟ್ರೇಲಿಯಾ ಸಂಸತ್ತು ಅಂಗೀಕರಿಸಿದ ಜೈವಿಕ ಸುರಕ್ಷತಾ ಕಾಯ್ದೆಯು ಇತರ ದೇಶಗಳಿಂದ ಆಸ್ಟ್ರೇಲಿಯಾಕ್ಕೆ ಹಲವಾರು ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುತ್ತದೆ. ವಿದೇಶಗಳಿಂದ ಬರುವ ಸಸ್ಯಗಳು ಮತ್ತು ಹೂವುಗಳು ಸೂಕ್ಷ್ಮಜೀವಿಗಳನ್ನು ಅಥವಾ ಅವುಗಳ ಪರಿಸರಕ್ಕೆ ಹಾನಿ ಮಾಡುವ ರೋಗಗಳನ್ನು ಪರಿಚಯಿಸಬಹುದು ಎಂಬ ಕಳವಳವಿದೆ. ಹೀಗಾಗಿ ಈ ನಿಯಮ ಜಾರಿಯಲ್ಲಿದೆ. (ಏಜೆನ್ಸೀಸ್​)