ಸಿನಿವಾಣಿ

ಹುಷಾರ್​ ನಾನು ನಿನಗಿಂತಲೂ ಕೊಳಕಾಗಿ ಮಾತನಾಡಬಲ್ಲೇ: ನಟಿ ವಿಜಯಲಕ್ಷ್ಮೀ ಖಡಕ್​ ವಾರ್ನಿಂಗ್​! Vijayalakshmi

Vijayalakshmi : ನಾಮ್​ ತಮಿಳರ್​ ಕಟ್ಚಿ (ಎನ್​ಟಿಕೆ) ಪಕ್ಷದ ಸಂಸ್ಥಾಪಕ, ನಟ ಮತ್ತು ನಿರ್ದೇಶಕ ಸೀಮನ್ ಹೇಳಿಕೆಗೆ ನಟಿ ವಿಜಯಲಕ್ಷ್ಮಿ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದು, ಆಕ್ರೋಶ ಹೊರಹಾಕಿದ್ದಾರೆ.

ಸೀಮನ್ ವಿರುದ್ಧ ನಟಿ ವಿಜಯಲಕ್ಷ್ಮಿ ಸಲ್ಲಿಸಿರುವ ಲೈಂಗಿಕ ಕಿರುಕುಳ ದೂರಿನ ತನಿಖೆ ನಡೆಸಿ 12 ತಿಂಗಳೊಳಗೆ ವರದಿ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಸರ್ಕಾಕ್ಕೆ ಆದೇಶಿಸಿದೆ. ಇದರ ಬೆನ್ನಲ್ಲೇ ಪೊಲೀಸರು ಸಮನ್ಸ್ ನೀಡಿದ್ದು, ಶುಕ್ರವಾರ (ಫೆ.28) ರಾತ್ರಿ ವಲಸರವಕ್ಕಂ ಪೊಲೀಸ್ ಠಾಣೆಗೆ ಹಾಜರಾಗಿ ಪೊಲೀಸರ ಪ್ರಶ್ನೆಗಳಿಗೆ ಸೀಮನ್​ ಉತ್ತರ ನೀಡಿದರು.

ಇದಾದ ನಂತರ, ಮಾಧ್ಯಮಗಳಗೊಂದಿಗೆ ಮಾತನಾಡಿದ ಸೀಮನ್​, ನಾನು ವಿಜಯಲಕ್ಷ್ಮಿ ಜೊತೆ ಕೇವಲ 6 ತಿಂಗಳು ಮಾತ್ರ ಇದ್ದೆ. ಅವಳಾಗೇ ಆಸೆ ಪಟ್ಟು ನನ್ನ ಜೊತೆ ಸಂಬಂಧ ಬೆಳೆಸಿಕೊಂಡಳು. ಬಳಿಕ ಅವಳಾಗಿಯೇ ನನ್ನನ್ನು ಬಿಟ್ಟು ಹೋದಳು. ನಾನು ಮದುವೆಯಾಗಿ 14 ವರ್ಷಗಳೇ ಕಳೆದರೂ ನೀವು ನನ್ನ ಮೇಲೆ ಏಕೆ ಆರೋಪ ಮಾಡುತ್ತಿದ್ದೀರಿ? ಎಂದು ಸೀಮನ್​, ವಿಜಯಲಕ್ಷ್ಮೀಯನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ವಿಡಿಯೋ ಬಿಡುಗಡೆ ಮಾಡಿರುವ ನಟಿ ವಿಜಯಲಕ್ಷ್ಮಿ, ಸೀಮನ್, 2023ರಲ್ಲಿ ನೀವು ನನಗೆ 50,000 ರೂಪಾಯಿಗಳನ್ನು ಏಕೆ ಕೊಟ್ಟಿದ್ದೀರಿ? ನಿಮ್ಮ ಮಧುರೈ ಸೆಲ್ವನ್ ನನಗೆ ಒಂದು ಕೋಟಿ ರೂಪಾಯಿಗಳನ್ನು ನೀಡಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳುವ ಮೂಲಕ ನನ್ನ ಗೌರವಕ್ಕೆ ಧಕ್ಕೆ ತಂದಿದ್ದೀರಿ. ಈ ಸಂಬಂಧ ಪ್ರಕರಣ ದಾಖಲಿಸಿದ್ದೇನೆ. ಮಧುರೈ ಸೆಲ್ವನ್ ನಿಮ್ಮನ್ನು ಏಕೆ ಉಳಿಸಲು ಪ್ರಯತ್ನಿಸಿದರು? ಎಂದು ಪ್ರಶ್ನಿಸಿದ್ದಾರೆ.

2008ರಿಂದ ನಾನು ನಿನ್ನ ಜೊತೆ ಕೇವಲ ಆರು ತಿಂಗಳು ಮಾತ್ರ ಸಂಬಂಧ ಬೆಳೆಸಿದೆನೇ? ಹಾಗಾದರೆ ನಾನು 2011ರಲ್ಲಿ ಹರಿದ ಬಟ್ಟೆಯಲ್ಲೇ ಆಯುಕ್ತರ ಕಚೇರಿಗೆ ಹೋಗಿ ಏಕೆ ದೂರು ಕೊಟ್ಟೆ? ನೀನು ನನಗೆ ನೀಡಿದ ಹಿಂಸೆಯನ್ನು ನನಗೆ ಸಹಿಸಲಾಗಲಿಲ್ಲ. ನೀನು ನನ್ನಿಂದ ವಿಡಿಯೋವನ್ನು ಏಕೆ ಖರೀದಿಸಿದೆ? ಕೇವಲ ನಾಟಕ ಸೃಷ್ಟಿಸಬೇಡ. ನೀನು ಅಸಭ್ಯವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ನಾನು ನಿನಗಿಂತ ಕೊಳಕು ಮಾತನಾಡಬಲ್ಲೆ ಎಂದು ವಿಜಯಲಕ್ಷ್ಮೀ ಕೋಪದಿಂದಲೇ ಮಾತನಾಡಿದ್ದಾರೆ.

ವಿಜಯಲಕ್ಷ್ಮಿ ಯಾರೆಂದು ನನಗೆ ತಿಳಿದಿಲ್ಲ ಎಂದು ನೀವು ಹೇಳಿದ್ದೀರಿ. ನನ್ನ ವಿರುದ್ಧ ಡಿಎಂಕೆ ತಂದ ವ್ಯಕ್ತಿ ಎಂದು ಹೇಳಿದ್ದೀರಿ. ಆದರೆ, ಮಾಧ್ಯಮದವರ ಮುಂದೆ 50 ಸಾವಿರ ನೀಡಿದ್ದೀನಿ ಎಂದು ಹೇಳಿದ್ದೀರಿ. ಸುಮ್ಮನೇ ನಾಟಕವಾಡಬೇಡಿ. ನಿಮ್ಮೊಂದಿಗೆ ವಾಸಿಸಿದ್ದಕ್ಕೆ ನನಗೆ ತುಂಬಾ ಬೇಸರವಾಗಿದೆ ಎಂದು ವಿಜಯಲಕ್ಷ್ಮಿ ಹೇಳಿದರು.

ಏನಿದು ಪ್ರಕರಣ?

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ತನಗೆ ಮೋಸ ಮಾಡಿದ್ದಾನೆ ಎಂದು ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮೀ ದೂರು ನೀಡಿದ್ದಾರೆ. ವಂಚನೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ನಿಷೇಧ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೀಮನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಜಯಲಕ್ಷ್ಮಿ 2011ರಲ್ಲಿ ಇದೇ ಆರೋಪದೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದರು. ಎಐಎಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ತನಿಖೆ ನಡೆಸಲಿಲ್ಲ ಎಂದು ವಿಜಯಲಕ್ಷ್ಮಿ ಹೇಳಿದರು. ಆದರೆ, ಡಿಎಂಕೆ ಸರ್ಕಾರದ ಮೇಲೆ ನಂಬಿಕೆ ಇದ್ದ ಕಾರಣ ಮತ್ತೆ ದೂರು ದಾಖಲಿಸಿದ್ದಾಗಿ ತಿಳಿಸಿದ್ದಾರೆ. ಮಹಿಳೆಯರಿಗೆ ಗೌರವ ಕೊಡದ ಸೀಮನ್​ನನ್ನು ನ್ಯಾಯಾಲಯ ಮುಂದೆ ತಂದು ನಿಲ್ಲಿಸುವುದೇ ನನ್ನ ಗುರಿ ಎಂದು ಈ ಹಿಂದೆ ವಿಜಯಲಕ್ಷ್ಮೀ ಹೇಳಿದ್ದರು. (ಏಜೆನ್ಸೀಸ್​)