Samantha : ನಟಿ ಸಮಂತಾ ಮಯೋಸಿಟಿಸ್ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈಗ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದಿದೆ. ಒಂದಷ್ಟು ಕಾಲ ಸಿನಿಮಾಗಳಿಂದ ವಿರಾಮ ಪಡೆದುಕೊಂಡಿದ್ದ ಸಮಂತಾ ಇತ್ತೀಚೆಗೆ ಸಿಟಾಡೆಲ್ ಹನಿ ಬನ್ನಿ ಸರಣಿಯ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ನವೆಂಬರ್ 7ರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಈ ವೆಬ್ಸರಣಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ತಾಜಾ ಸಂಗತಿ ಏನೆಂದರೆ, ಸಮಂತಾ ಅವರಿಗೆ 25 ಲಕ್ಷ ರೂ. ಹಣ ಸಹಾಯ ಮಾಡಿದ್ದೆ ಎಂದು ನಿರ್ಮಾಪಕರೊಬ್ಬರು ಹೇಳಿಕೆ ನೀಡಿದ್ದಾರೆ. ನಾಯಕ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅವರ ತಂದೆ ಬೆಲ್ಲಂಕೊಂಡ ಸುರೇಶ್ ಅವರು ಈ ಹಿಂದೆ ಅನೇಕ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಿನಿಮಾ ನಿರ್ಮಾಣದಿಂದ ಅಂತರ ಕಾಯ್ದುಕೊಂಡಿದ್ದರು. ಸುಮಾರು 9 ವರ್ಷಗಳ ನಂತರ ಮತ್ತೆ ನಿರ್ಮಾಪಕರಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬೆಲ್ಲಂಕೊಂಡ ಸುರೇಶ್ ಅವರು ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿದರು. ಈ ವೇಳೆ ಅವರು ಸಮಂತಾ ಬಗ್ಗೆ ಮಾತನಾಡಿದ್ದಾರೆ.
ಬೆಲ್ಲಂಕೊಂಡ ಶ್ರೀನಿವಾಸ್ ಅವರ ಮೊದಲ ಚಿತ್ರ ಅಲ್ಲುಡು ಸೀನು ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ದರು. ಆ ಚಿತ್ರದ ನಿರ್ಮಾಪಕರು ಬೆಲ್ಲಂಕೊಂಡ ಸುರೇಶ್. ಅಲ್ಲುಡು ಸೀನು ಸಿನಿಮಾ ಚಿತ್ರೀಕರಣದ ಸಮಯದಲ್ಲೂ ಸಮಂತಾಗೆ ಆರೋಗ್ಯ ಸಮಸ್ಯೆ ಇತ್ತು. ಅದು ಚರ್ಮದ ಸಮಸ್ಯೆಗೆ ಸಂಬಂಧಿಸಿತ್ತು. ಅದರಿಂದ ಚೇತರಿಸಿಕೊಳ್ಳಲು ಸಮಂತಾಗೆ ಹಣದ ಅಗತ್ಯವಿತ್ತು ಎಂದು ಹೇಳಿದ್ದಾರೆ.
ಆ ಸಮಯದಲ್ಲಿ ನಾನು ಕೆಲ ನಿರ್ಮಾಪಕರಿಗೆ ಕರೆ ಮಾಡಿ ಹಣ ಕೇಳಿದೆ. ಆದರೆ, ಯಾರೂ ಹಣ ಕೊಡಲಿಲ್ಲ. ಆಗ ನಾನೇ ಸಮಂತಾ ಅವರಿಗೆ 25 ಲಕ್ಷ ಕೊಟ್ಟೆ. ಅಲ್ಲದೆ, ಸಿನಿಮಾ ಶೂಟಿಂಗ್ ಮುಗಿಯುವವರೆಗೂ ಸ್ಟಾರ್ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿ ಇರಿಸಿದ್ದೆ. ಸುಮಾರು ನಾಲ್ಕು ತಿಂಗಳಲ್ಲಿ ಚರ್ಮದ ಸಮಸ್ಯೆಯಿಂದ ಸಮಂತಾ ಚೇತರಿಸಿಕೊಂಡರು. ನಾನು ನೀಡಿದ ಸಹಾಯವನ್ನು ಸಮಂತಾ ಎಂದಿಗೂ ಮರೆಯುವುದಿಲ್ಲ. ಸಮಂತಾ ಈಗ ನಮ್ಮ ಕುಟುಂಬದ ಸದಸ್ಯೆ ಎಂದು ಬೆಲ್ಲಂಕೊಂಡ ಸುರೇಶ್ ಹೇಳಿದ್ದಾರೆ.
ಇದೀಗ ಬೆಲ್ಲಂಕೊಂಡ ಸುರೇಶ್ ಅವರು ಮಾಡಿದ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೆಲುಗು ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್)