

ಹೈದರಾಬಾದ್: ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು ಮತ್ತು ಅಕ್ಕಿನೇನಿ ನಾಗಚೈತನ್ಯ ಪ್ರೀತಿಸಿ ಕುಟುಂಬಸ್ಥರ ಸಮ್ಮುಖದಲ್ಲಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ 2021ರಲ್ಲಿ ಇಬ್ಬರು ವಿಚ್ಛೇದನ ಪಡೆದದ್ದು ಎಲ್ಲರಿಗೂ ಗೊತ್ತೆ ಇದೆ. ಬಳಿಕ ಮೈಯೋಸಿಟಿಸ್ನಿಂದ ಬಳಲುತ್ತಿದ್ದ ನಟಿ ಸಮಂತಾ ವೃತ್ತಿಜೀವನದಿಂದ ವಿರಾಮ ತೆಗೆದುಕೊಂಡಿದ್ದರು. ಇಷ್ಟು ದಿನ ಈ ವಿಚಾರಗಳ ಬಗ್ಗೆ ಮೌನವಹಿಸಿದ್ದ ನಟಿ ಈಗ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ವಿಚ್ಛೇದನ ಹಾಗೂ ಮಯೋಸಿಟಿಸ್ ಕಾಯಿಲೆ ಬಗ್ಗೆ ಪ್ರಸ್ತಾಪಿಸಿದ ಸಮಂತಾ, ನಾವೆಲ್ಲರೂ ಜೀವನದಲ್ಲಿ ಕೆಲವು ವಿಷಯಗಳನ್ನು ಬದಲಾಯಿಸಲು ಬಯಸುತ್ತೇವೆ. ಆದರೆ ಜೀವನ ಯಾವ ದಾರಿಯಲ್ಲಿ ಹೋಗಬೇಕು ಎಂದು ನಿರ್ಣಯವಾಗಿರುತ್ತದೋ ಅದೇ ದಾರಿಯಲ್ಲಿ ಹೋಗಬೇಕಾಗುತ್ತದೆ, ಬೇರೆ ದಾರಿ ಇರುವುದಿಲ್ಲ. ಕಳೆದ ಮೂರು ವರ್ಷಗಳಿಂದ ನಾನು ಮತ್ತೆ ಎಂದಿಗೂ ಕಷ್ಟಪಡುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಜೀವನದಲ್ಲಿ ಎದುರಾಗುವ ಪರಿಸ್ಥಿತಿಯನ್ನು ಅದರಿಂದ ಹೊರಬರುವವರೆಗೂ ಎದುರಿಸಬೇಕಾಗುತ್ತದೆ. ಅದನ್ನು ಎದುರಿಸಲು ಬಲಶಾಲಿಯಾಗಿರಬೇಕು ಎಂದು ಹೇಳಿದ್ದಾರೆ.
ನಾನು ಈಗ ಮೊದಲಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದೇನೆ. ಇದಕ್ಕೆಲ್ಲ ಕಾರಣ ಅಧ್ಯಾತ್ಮಿಕ ಚಿಂತನೆಯಲ್ಲಿ ತೊಡಗುವುದು ಎಂದು ನಾನು ಭಾವಿಸುತ್ತೇನೆ. ಆಧ್ಯಾತ್ಮಿಕತೆಯಲ್ಲಿ ತೊಡಗಿರುವುದು ನನ್ನ ಜೀವನದ ಎಲ್ಲಾ ಅಂಶಗಳ ಮೇಲೆ ಪರಿಣಾಮ ಬೀರಿದೆ. ಪರಿಸ್ಥಿತಿಗಳನ್ನು ನಿವಾರಿಸಲು ಆಧ್ಯಾತ್ಮಿಕತೆಯು ನನಗೆ ಬೇಕಾದ ಶಕ್ತಿಯಾಯಿತು. ಆಧ್ಯಾತ್ಮಿಕತೆಯು ಅಂತ್ಯವಿಲ್ಲದ ಶಕ್ತಿ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)