ಸಿನಿವಾಣಿ

ಹೊಸಬರ 'ಹೊಸ ದಿನಚರಿ' ... ಡಿ.9ರಂದು ಚಿತ್ರ ಬಿಡುಗಡೆ

chetannadiger

ಬೆಂಗಳೂರು: ಈ ಹಿಂದೆ 'ಆಯನ' ಎಂಬ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿದ್ದ ಗಂಗಾಧರ ಸಾಲಿಮಠ, ಈಗ ಇನ್ನೊಂದು ಹೊಸ ಚಿತ್ರವನ್ನು ಸದ್ದಿಲ್ಲದೆ ನಿರ್ಮಿಸಿದ್ದಾರೆ. ಅದೇ 'ಹೊಸ ದಿನಚರಿ'. ಈ ಚಿತ್ರವು ತಯಾರಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಹಿರಿಯ ನಿರ್ದೇಶಕ ಟಿ.ಎಸ್​. ನಾಗಾಭರಣ ಅವರಿಂದ ಪೋಸ್ಟರ್​ ಮತ್ತು ಟೀಸರ್​ ಬಿಡುಗಡೆಯಾಗಿದೆ.

ಎಲ್ಲರ ಜೀವನದಲ್ಲೂ ಪ್ರೀತಿ ಇದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ? ಎಂಬುದೆ 'ಹೊಸ ದಿನಚರಿ' ಚಿತ್ರದ ಸಾರಾಂಶ. ಈ ಚಿತ್ರವನ್ನು ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ ಜತೆಯಾಗಿ ನಿರ್ದೇಶನ ಮಾಡಿದ್ದಾರೆ.

ಈ ಕುರತು ಜಂಟಿಯಾಗಿ ಮಾತನಾಡಿದ ಅವರು, 'ನಾವು ಸೇರಿದಂತೆ ಈ ಚಿತ್ರತಂಡದ ಅನೇಕ ಸದಸ್ಯರು ಹೊಸಬರು. ಈ ಹಿಂದೆ ಕೆಲವು ಕಿರುಚಿತ್ರಗಳು ಮಾಡಿರುವ ಅನುಭವ ನಮಗಿದೆ. ನಮ್ಮ ಈ ಕನಸನ್ನು ನಿರ್ಮಾಪಕರಾದ ಮೃತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ ಸಾಲಿಮಠ ನನಸು ಮಾಡಿದ್ದಾರೆ. ಡಿಸೆಂಬರ್ 9ರಂದು ಚಿತ್ರ ಬಿಡುಗಡೆಯಾಗಲಿದೆ' ಎಂದು ಹೇಳಿದರು.

'ಹೊಸ ದಿನಚರಿ' ಚಿತ್ರದಲ್ಲಿ ದೀಪಕ್ ಸುಬ್ರಹ್ಮಣ್ಯ‌, ಚೇತನ್ ವಿಕ್ಕಿ, ಮಂದಾರ, ವರ್ಷ, ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ವೈಶಾಖ್​ ವರ್ಮ ಅವರ ಸಂಗೀತ ಮತ್ತು ರಾಕಿ ಅವರ ಛಾಯಾಗ್ರಹಣವಿದೆ.