ಸಿನಿವಾಣಿ

ಸೌಂಡ್ ಆಫ್ ಮ್ಯೂಸಿಕ್ ಇದೆ; ಸೌಂಡ್ ಆಫ್ ರುಪಿ ಬೇಕು: ಹಂಸಲೇಖ

ಬೆಂಗಳೂರು: 'ನಾದಬ್ರಹ್ಮ' ಹಂಸಲೇಖ ಇರುವ ಕಡೆ ಮಾತಿಗೆ ಬರವಿಲ್ಲ. ತಮ್ಮ ಮಾತುಗಳಿಂದ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವ ಅವರು, ಕನ್ನಡ ಚಿತ್ರರಂಗದಲ್ಲಿ ಸೌಂಡ್​ ಆಫ್​ ಮ್ಯೂಸಿಕ್​ ಇದೆ, ಕೊರತೆ ಇರುವುದು ಸಛಂಡ್​ ಆಫ್​ ರುಪಿಯಲ್ಲಿ ಮಾತ್ರ. ಹಾಗಾಗಿ, ಮೊದಲು ಸೌಂಡ್​ ಆಫ್​ ರುಪಿ ಬೇಕಿದೆ ಎಂದು ಹೇಳಿದ್ದಾರೆ.

ಸೌಂಡ್​ ಇಂಜಿನಿಯರ್​ ಮತ್ತು ಸಂಗೀತ ನಿರ್ದೇಶಕ ಪಳನಿಸೇನಾಪತಿ ಅವರ ’ಪಲ್ಸ್ ರೆರ್ಕಾಡಿಂಗ್ ಸ್ಟುಡಿಯೋ’ ಎಂಬ ಹೊಸ ಸ್ಟುಡಿಯೋ ಪ್ರಾರಂಭಿಸಿದ್ದಾರೆ. ಗುರುವಾರ ಈ ಸ್ಟುಡಿಯೋ ಉದ್ಘಾಟಿಸಿದ ಹಂಸಲೇಖ ಅವರು, ಕನ್ನಡ ಚಿತ್ರರಂಗಕ್ಕೆ ಈಗ ಅಗತ್ಯವಾಗಿ ಏನು ಬೇಕಾಗಿದೆ ಎಂಬುದನ್ನು ಬಹಳ ಚೆನ್ನಾಗಿ ಮಾತನಾಡಿದ್ದಾರೆ.

ಸ್ಟುಡಿಯೋ ಉದ್ಘಾಟನೆ ಮಾಡಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಮಾಡುವ ಜಾಣತನ ಬೇಕಾಗಿದೆ. ಇವತ್ತು ಉತ್ಪಾದನೆ ಇಷ್ಟು, ಮಾರಾಟ ಆಗುವ ಜಾಗಗಳು ಅಷ್ಟು, ಅದರಲ್ಲಿ ಹುಷಾರಾಗಿ ಮಾರಾಟ ಮಾಡಿ ದುಡ್ಡು ವಾಪಸ್ಸು ತೆಗೆದುಕೊಳ್ಳಬೇಕಿದೆ. ಇವತ್ತು ಸಂಗೀತ ಕ್ಷೇತ್ರದಲ್ಲಿ ಎಂಥೆಂಥಾ ಮೆಶೀನ್​ಗಳು ಬಂದಿವೆ. ಅವೆಲ್ಲಾ ಕೆಲಸ ಮಾಡ್ತಾ ಇದೆ ಅಂತ ಹೇಳೋಕೆ ಆಗೋಲ್ಲ. ಏಕೆಂದರೆ, ಅದರ ಹಿಂದೆ ಫೂಲ್ಸ್ ಕೂತಿರ‍್ತಾರೆ. ಆದರೆ, ಇಲ್ಲಿ ಟೂಲ್ಸ್ ಮತ್ತು ಪಲ್ಸ್ ಜತೆಯಾಗಿದೆ. ಪಳನಿಗೆ ಜನರ ಪಲ್ಸ್​ ಏನು ಎಂದು ಗೊತ್ತಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟ ಕಾಪಾಡಿಕೊಂಡು ಒಳ್ಳೆಯ ಕೆಲಸಗಳನ್ನು ಮಾಡಲಿ' ಎಂದು ಅವರು ಕಿವಿಮಾತು ಹೇಳಿದರು.

ನಂತರ ಮಾತನಾಡಿದ ಪಳನಿ ಸೇನಾಪತಿ, 'ಇಲ್ಲಿಯವರೆಗೂ ೧೦೦೦ಕ್ಕೂ ಹೆಚ್ಚು ಚಿತ್ರಗಳಿಗೆ ಸೌಂಡ್​ ರೆಕಾರ್ಡಿಂಗ್​ ಮಾಡಿ ಇಂದು ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ತಂತ್ರಜ್ನಾನ ಮುಂದುವರಿದಂತೆ ಎಲ್ಲವು ಸಾಫ್ಟ್‌ವೇರ್ ಆಗಿರುವುದರಿಂದ ದೊಡ್ಡ ಜಾಗದಲ್ಲಿ ಸ್ಟುಡಿಯೋ ಮಾಡಬೇಕಾಗಿಲ್ಲ. ಚಿಕ್ಕ ಸ್ಥಳದಲ್ಲೆ ದೊಡ್ಡ ಕೆಲಸವನ್ನು ಮಾಡಬಹುದು. ಅಂತಹುದೆ ಸೇವೆಯನ್ನು ಶುರು ಮಾಡಲಾಗಿದೆ. ಹಂಸಲೇಖ ನನಗೆ ಗಾಡ್‌ಫಾದರ್. ಕರ್ನಾಟಕದ ತಂತ್ರಜ್ನರು ಯಾವ ರೀತಿಯಲ್ಲೂ ಕಡಿಮೆ ಇಲ್ಲ. ಮನಸ್ಸು ಮಾಡಿದರೆ ವಂಡರ್ಸ್​ ಮಾಡಬಹುದು. ಆದರೆ, ಆರ್ಥಿಕ ಪರಿಸ್ಥಿತಿಯಿಂದ ಅಂದುಕೊಂಡಂತೆ ಕೆಲಸಗಳು ಆಗುತ್ತಿಲ್ಲ. ಸರ್ಕಾರವು ದೊಡ್ಡದಾದ ಸ್ಟುಡಿಯೋ ತೆರೆಯಲು ಬಂಡವಾಳ ಹೂಡಿದರೆ, ನಾವುಗಳು ಏನೆಂದು ತೋರಿಸಬಹುದು' ಎಂದು ಹೇಳಿದರು.

ಹಿರಿಯ ನಿರ್ದೇಶಕ ಭಗವಾನ್, ಲಹರಿ ವೇಲು, ವಿ.ಮನೋಹರ್, ನಟ ವಿಜಯ್‌ ಮಹೇಶ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.