ಸಿನಿವಾಣಿ

ಆರೋಪಗಳಿಗೆ ರಿಯಲ್​ ಗುಂಜನ್​ ಸಕ್ಸೇನಾ ಉತ್ತರ

ಕರಣ್​ ಜೋಹರ್​ ನಿರ್ಮಾಣದ ಮತ್ತು ಜಾಹ್ನವಿ ಸಕ್ಸೇನಾ ಅಭಿನಯದ 'ಗುಂಜನ್​ ಸಕ್ಸೇನಾ: ದಿ ಕಾರ್ಗಿಲ್​ ಗರ್ಲ್​' ಚಿತ್ರದ ಬಗ್ಗೆ ದಿನಕ್ಕೊಂದು ದೂರಗಳು ಕೇಳಿ ಬರುತ್ತಿವೆ. ಮೊದಲು ಇಂಡಿಯನ್​ ಏರ್​ ಫೋರ್ಸ್​, ಚಿತ್ರದಲ್ಲಿ ಕೆಲವು ಆಕ್ಷೇಪಾರ್ಹ ವಿಷಯಗಳಿವೆ ಎಂದು ಆರೋಪಿಸಿತ್ತು. ಅಷ್ಟೇ ಅಲ್ಲ, ಆ ಆಕ್ಷೇಪಾರ್ಹ ದೃಶ್ಯಗಳನ್ನು ತಕ್ಷಣವೇ ಕತ್ತರಿಸಬೇಕು ಎಂದು ಚಿತ್ರತಂಡಕ್ಕೆ ತಾಕೀತು ಮಾಡಿತ್ತು.

ಆ ನಂತರ ರಿಟೈರ್ಡ್​​ ವಿಂಗ್​ ಕಮಾಂಡರ್​ ನಮ್ರತಾ ಚಂಡಿ ಅವರು, ಕಾರ್ಗಿಲ್​ನಲ್ಲಿ ಫ್ಲೈಟ್​ ಓಡಿಸಿದ ಮೊದಲ ಮಹಿಳೆ ಶ್ರೀವಿದ್ಯಾ ರಾಜನ್​ ಹೊರತು, ಗುಂಜನ್​ ಅಲ್ಲ ಎಂದು ಹೇಳಿದ್ದರು. ಹೀಗೆ ಚಿತ್ರದ ಬಗ್ಗೆ ದಿನಾ ಒಂದೊಂದು ಹೊಸ ವಿಷಯ ಕೇಳಿ ಬರುತ್ತಿದ್ದಂತೆಯೇ ಸ್ವತಃ ಗುಂಜನ್​ ಸಕ್ಸೇನಾ ಅವರೇ ಮುಂದೆ ಬಂದು ಮಾತನಾಡಿದ್ದಾರೆ.

'ನನ್ನ ಬಯೋಪಿಕ್​ನಲ್ಲಿ ಕೆಲವೊಂದು ವಿಚಾರದಲ್ಲಿ ಉತ್ಪ್ರೇಕ್ಷೆ ಮಾಡಿರುವುದು ಹೌದು. ಅದು ಚಿತ್ರಕ್ಕಾಗಿಯೇ ಹೊರತು, ಯಾರನೋ ಕೀಳಾಗಿ ತೋರಿಸಬೇಕು ಎಂಬ ಕಾರಣಕ್ಕಾಗಿ ಅಲ್ಲ. ಆದರೆ, ಇದೇ ವಿಚಾರವನ್ನು ಮುಂದಿಟ್ಟುಕೊಂಡು, ಇಷ್ಟು ವರ್ಷ ನಾನು ಮಾಡಿದ ಕೆಲಸ ಮತ್ತು ಸಾಧನೆಯನ್ನು ಕಡೆಗಣಿಸಿ, ನನ್ನ ಹೆಸರಿಗೆ ಮಸಿ ಬಳಿಯುವುದಕ್ಕೆ ಒಂದು ಗುಂಪು ಪ್ರಯತ್ನಿಸುತ್ತಿದೆ' ಎಂದು ಹೇಳಿದ್ದಾರೆ.

ತಮ್ಮ ಹೆಸರಿನಲ್ಲಿ ಹಲವು ಮೊದಲುಗಳು ಇರುವುದಾಗಿ ಹೇಳಿಕೊಂಡಿರುವ ಅವರು. 'ಕಾಂಬ್ಯಾಟ್​ ಜೋನ್​ನಲ್ಲಿ ಫ್ಲೈ ಮಾಡಿದ ಮೊದಲ ಮಹಿಳೆ ನಾನು. ಮಹಿಳಾ ಹೆಲಿಕಾಫ್ಟರ್​​ ಪೈಲೆಟ್​​ಗಳ ಪೈಕಿ ಮೊದಲಿಗಳು ನಾನು. ಜಂಗಲ್​ ಆಂಡ್​ ಸ್ನೋ ಸರ್ವೈವಲ್​ ಕೋರ್ಸ್​ನಲ್ಲಿ ಭಾಗವಹಿಸಿದ ಮೊದಲ ಮಹಿಳೆ ನಾನು. ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಗಿಲ್​ ಯುದ್ಧದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಪೈಲೆಟ್​ ನಾನು. ಈ ವಿಷಯವನ್ನು ಇಂಡಿಯನ್​ ಏರ್​ ಫೋರ್ಸ್​ನಲ್ಲಿ ನೀವು ಯಾರನ್ನು ಬೇಕಾದರೂ ಕೇಳಬಹುದು' ಎಂದು ಅವರು ಸವಾಲು ಹಾಕಿದ್ದಾರೆ.

ಇನ್ನು ಚಿತ್ರರಂಗದಲ್ಲಿ ತೋರಿಸಲಾಗಿರುವ ಲಿಂಗ ತಾರತಮ್ಯದ ಕುರಿತು ಮಾತನಾಡಿರುವ ಅವರು, 'ನಾನು ಫೋರ್ಸ್​ ಸೇರಿದಾಗ ಸಾಂಸ್ಥಿಕ ಮಟ್ಟದಲ್ಲಿ ಯಾವುದೇ ತಾರತಮ್ಯವಿರಲಿಲ್ಲ. ಆದರೆ, ಕೆಲವರಿಗೆ ಬೇರೆ ತರಹದ ಅನುಭವಗಳಾಗಿರಬಹುದು. ಇದು ಖಂಡಿತಾ ಸಾಧ್ಯವಿಲ್ಲ ಎನ್ನುವುದು ತಪ್ಪು. ಮಹಿಳೆ ಎಂಬ ಕಾರಣಕ್ಕೆ ಕೆಲವರು ಪೂರ್ವಾಗ್ರಹದಿಂದ ನೋಡಿದರು. ಇನ್ನೂ ಕೆಲವು ಕಡೆ ತಾರತಮ್ಯ ಎದುರಿಸಬೇಕಾಯಿತು. ಆದರೆ, ಇದ್ಯಾವುದೂ ಸಾಂಸ್ಥಿಕ ಮಟ್ಟದಲ್ಲಲ್ಲ. ಅಲ್ಲಿ ಯಾವತ್ತೂ ನನಗೆ ಒಳ್ಳೆಯ ಅವಕಾಶಗಳೇ ಸಿಕ್ಕವು' ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ಚಿತ್ರವಿಮರ್ಶೆಗಳ ಕುರಿತು ಮಾತನಾಡಿರುವ ಅವರು,'ಇದು ಬರೀ ನನ್ನ ಕುರಿತ ಚಿತ್ರವಲ್ಲ. ಇದೊಂದು ಸ್ಫೂರ್ತಿಯ ಕುರಿತಾದ ಚಿತ್ರ. ಜನರನ್ನು ಸ್ಫೂರ್ತಿಗೊಳಿಸುವ, ಅವರನ್ನು ಪಾಸಿಟಿವ್​ ದಿಕ್ಕಿನತ್ತ ಕರೆದೊಯ್ಯುವ ಆಸೆ ಚಿತ್ರತಂಡಕ್ಕಿತ್ತು. ಅದನ್ನು ನನ್ನ ಕಥೆಯ ಮೂಲಕ ಹೇಳಿದ್ದಾರೆ ಅಷ್ಟೇ' ಎಂದು ಗುಂಜನ್​ ಹೇಳಿದ್ದಾರೆ.