ಬೆಂಗಳೂರು: ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಸಂಬಂಧಿ ಕೆಲಸಗಳು ಸ್ಥಗಿತಗೊಂಡು ಹತ್ರತ್ರ 50 ದಿನಗಳಾದವು. ಇಂದಿಗೂ ಸಿನಿಮಾ ಕೆಲಸಗಳು ಶುರುವಾಗಿಲ್ಲ. ಆದರೆ, ಇದೀಗ ಸಿನಿಮಾ ಮಂದಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇಂದಿನಿಂದ (ಮೇ 9) ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ನೀಡಬಹುದಂತೆ. ಸರ್ಕಾರದ ಮಟ್ಟದಿಂದಲೂ ಈ ಬಗ್ಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಶೀಘ್ರದಲ್ಲಿಯೇ ಅಧಿಕೃತ ಘೋಷಣೆ ಆಗಲಿದೆ.
ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಭೇಟಿಯಾಗಿ, ಅವರ ಸಮ್ಮುಖದಲ್ಲಿಯೇ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಿನಿಮಾ ಕೆಲಸಗಳ ಚಾಲನೆಗೆ ಸಂಬಂಧಿಸಿದಂತೆ ಮನವಿಯೊಂದನ್ನು ನೀಡಿದ್ದರು. ಮನವಿ ಪತ್ರದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗಷ್ಟೇ ಚಾಲನೆ ನೀಡುವ ಬಗ್ಗೆ ಕೋರಿದ್ದರು. ಅದರಂತೆ ಸಿಎಂ ಕಡೆಯಿಂದ ಒಪ್ಪಿಗೆ ಸಿಕ್ಕಿದ್ದು, ಕೆಲಸವನ್ನು ಶುರು ಮಾಡಿಕೊಳ್ಳುವಂತೆ ಹೇಳಿದ್ದಾರೆ ಎಂದು ಜೈರಾಜ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಹಾಗಾದರೆ ಯಾವೆಲ್ಲ ಕೆಲಸಗಳು ಶುರು? ಸದ್ಯಕ್ಕೆ ಶೂಟಿಂಗ್ ಮುಗಿಸಿಕೊಂಡ ಸಿನಿಮಾಗಳು ಬಾಕಿ ಉಳಿದ ಡಬ್ಬಿಂಗ್, ರೀ ರೆಕಾರ್ಡಿಂಗ್, ಡಿಐ, ಸೌಂಡ್ ಡಿಸೈನಿಂಗ್, ಸೌಂಡ್ ಮಿಕ್ಸಿಂಗ್, ವಿಶ್ಯುವಲ್ ಗ್ರಾಫಿಕ್ಸ್, ಸಿಜಿಐ ಸೇರಿ ಹಲವು ಪ್ಯಾಚ್ ವರ್ಕ್ ಕೆಲಸಗಳನ್ನು ಮಾಡಿಕೊಳ್ಳಬಹುದು. ಗಮನಿಸಬೇಕಾದ ಅಂಶ ಏನೆಂದರೆ, ಬೆರಳೆಣಿಕೆ ಜನ ಮಾತ್ರ ಈ ಕೆಲಸದಲ್ಲಿ ಹಾಜರಿರಬೇಕು. ಅನವಶ್ಯಕವಾಗಿ ಯಾರನ್ನೂ ಕೂರಿಸಿಕೊಳ್ಳುವಂತಿಲ್ಲ.
‘ಈ ನೀತಿಯಿಂದ ನಿಸ್ತೇಜವಾಗಿದ್ದ ಚಿತ್ರರಂಗ ಚುರುಕಾಗಲಿದೆ. ನಿರ್ಮಾಪಕರು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಲಿದ್ದಾರೆ. ಬಿಡುಗಡೆ ಬಗ್ಗೆ ಪ್ಲ್ಯಾನ್ಗಳು ನಡೆಯಲಿವೆ. ಸದ್ಯ ಚಿತ್ರೀಕರಣೋತ್ತರ ಕೆಲಸಗಳಿಗೆ ಸಮ್ಮತಿ ಸಿಕ್ಕಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ, ಚಿತ್ರೀಕರಣಕ್ಕೂ ಆದಷ್ಟು ಬೇಗನೆ ಅವಕಾಶ ಸಿಗುವ ಸಾಧ್ಯತೆ ಇದೆ’ ಎಂದು ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ.