ಸಿನಿವಾಣಿ

ಏಳು ವರ್ಷಗಳ ನಂತರ ಮತ್ತೆ ಪ್ರತ್ಯಕ್ಷವಾದ 'ಗೂಗ್ಲಿ' ಟೈಟಲ್​ ಟೀಸರ್​

suchetana

ಪವನ್ ಒಡೆಯರ್​ ನಿರ್ದೇಶನದ ಮತ್ತು ಯಶ್​-ಕೃತಿ ಖರಬಂದಾ ಅಭಿನಯದ 'ಗೂಗ್ಲಿ' ಚಿತ್ರವು ಬಿಡುಗಡೆಯಾಗಿ ಜುಲೈ 19ಕ್ಕೆ ಏಳು ವರ್ಷಗಳಾಗಿವೆ. ಚಿತ್ರದ ಸೀಕ್ವೆಲ್​ ಮಾಡಬೇಕು ಎಂಬ ಒತ್ತಾಯ ಯಶ್​ ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಹೀಗಿರುವಾಗಲೇ, ಪವನ್​ ಚಿತ್ರದ ಟೈಟಲ್​ ಟೀಸರ್​ ಮತ್ತೊಮ್ಮೆ ಪ್ರತ್ಯಕ್ಷವಾಗಿದೆ.

ಚಿತ್ರದ ಟೈಟಲ್​ಗೆಂದೇ ಪ್ರತ್ಯೇಕವಾದ ಟೀಸರ್​ ಮಾಡುವ ಪರಿಪಾಠ ಕನ್ನಡ ಚಿತ್ರರಂಗದಲ್ಲಿರಲಿಲ್ಲ. ಅದನ್ನು 'ಗೂಗ್ಲಿ' ಮೂಲಕ ಮೊದಲ ಬಾರಿಗೆ ಪ್ರಯತ್ನಿಸಿದ್ದರು ಪವನ್​. ಈ ಟೀಸರ್​ ಮಾಡಿ, ಯೂಟ್ಯೂಬ್​ನ ತಮ್ಮದೇ ಚಾನಲ್​ನಲ್ಲಿ ಬಿಡುಗಡೆ ಮಾಡಿದ್ದರು. ಈಗ ಅದನ್ನು ಮತ್ತೊಮ್ಮೆ ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಪವನ್​ ಟೈಟಲ್​ ಟೀಸರ್​ ಮಾಡುವುದಕ್ಕೂ ಒಂದು ಕಾರಣವಿದೆ. ಪ್ರಮುಖವಾಗಿ, ಅವರು ಚಿತ್ರಕ್ಕೆ 'ಗೂಗ್ಲಿ' ಎಂಬ ಹೆಸರಿಟ್ಟಾಗ, ನಿರ್ಮಾಪಕ ಜಯಣ್ಣ ಬೇಡ ಎಂದರಂತೆ. 'ಅಪ್ಪಾಜಿ, ಗೂಗ್ಲಿ ಎಂದರೇನು ಅಂತ ನನಗೇ ಅರ್ಥ ಆಗಲ್ಲ. ಇನ್ನು ಜನಕ್ಕೇನು ಗೊತ್ತಾಗುತ್ತೆ' ಎಂದರಂತೆ. ಆದರೆ, ಗೂಗ್ಲಿ ಎನ್ನುವುದು ಪಾಪ್ಯುಲರ್​ ಆದ ಪದ. ಕ್ರಿಕೆಟ್​ ಗೊತ್ತಿರುವವರಿಗೆ ಖಂಡಿತಾ ಅರ್ಥವಾಗುತ್ತದೆ ಎಂದು ಪವನ್​ ಹೇಳಿದರಂತೆ.

ಕೊನೆಗೆ ಈ ಪದ ಎಷ್ಟು ಜನರಿಗೆ ಅರ್ಥವಾಗುತ್ತದೋ ಎಂದು ತಿಳಿದುಕೊಳ್ಳುವುದಕ್ಕೆ ಹಲವರನ್ನು ಸಂದರ್ಶನ ಮಾಡಿದ್ದಾರೆ. ಆ ಬೈಟ್​ಗಳನ್ನೆಲ್ಲಾ ಇಟ್ಟುಕೊಂಡು ಒಂದು ಚೆಂದದ ಟೀಸರ್​ ಮಾಡಿದ್ದಾರೆ. ಆ ಟೀಸರ್​ ಎಲ್ಲರಿಂದ ಮೆಚ್ಚುಗೆ ಪಡೆದಿತ್ತು. ಆದರೆ, ಏಳು ವರ್ಷಗಳ ಹಿಂದೆ ಇಂಟರ್​ನೆಟ್​ ಬಳಕೆ ಕಡಿಮೆ ಇತ್ತು. ಇನ್ನು ಯೂಟ್ಯೂಬ್​ ನೋಡುವವರ ಸಂಖ್ಯೆ ಇನ್ನೂ ಕಡಿಮೆಯೇ. ಹಾಗಾಗಿ, ಆಗ ಮಾಡಿದ ಟೀಸರ್​ ಬಗ್ಗೆ ಜನ ಈಗೇನು ಹೇಳುತ್ತಾರೆ ಎಂಬ ಕುತೂಹಲದಿಂದ, ಈ ಟೀಸರ್​ ಹಂಚಿಕೊಂಡಿದ್ದಾರೆ ಪವನ್​ ಒಡೆಯರ್​.

ಅಂದಹಾಗೆ, 'ಗೂಗ್ಲಿ' ಚಿತ್ರದಲ್ಲಿ ಯಶ್​ ಮತ್ತು ಕೃತಿ ಜತೆಗೆ ಅನಂತ್​ ನಾಗ್​, ಸುಧಾ ಬೆಳವಾಡಿ, ಸಾಧು ಕೋಕಿಲ ಮುಂತಾದವರು ಅಭಿನಯಿಸಿದ್ದರು. ಚಿತ್ರಕ್ಕೆ ಜೋಶ್ವಾ ಶ್ರೀಧರ್​ ಸಂಗೀತ ಸಂಯೋಜಿಸಿದ್ದರು.