ಸಿನಿವಾಣಿ

ಆರಂಭಕ್ಕೂ ಮುನ್ನವೇ ಅಂತ್ಯವಾಯ್ತಾ ವಿಕಿ-ಕತ್ರೀನಾ ಮದುವೆ? ವಿಕಿ ಕಸಿನ್​ ಸ್ಫೋಟಕ ಹೇಳಿಕೆ

ಮುಂಬೈ: ಬಾಲಿವುಡ್​ ಬೆಡಗಿ ಕತ್ರೀನಾ ಕೈಫ್​ ಮತ್ತು ನಟ ವಿಕಿ ಕೌಶಲ್​ರ ಮದುವೆಯ ತಯಾರಿಗಳ ಸುದ್ದಿಗಳು ಎಲ್ಲೆಡೆ ಹಬ್ಬಿವೆ. ಈ ಸಂದರ್ಭದಲ್ಲಿ ವಿಕಿ ಸಂಬಂಧಿಕರೊಬ್ಬರು ಸದ್ಯಕ್ಕೆ ಮದುವೆ ನಡೆಯುತ್ತಿಲ್ಲ ಎಂದು ಹೇಳಿರುವ ವರದಿ ಹೊರಬಿದ್ದಿದೆ. ಆದರೆ, ವಿಕಿ ಮತ್ತು ಕತ್ರೀನಾ ಈ ಬಗ್ಗೆ ಯಾವುದೇ ಕಾಮೆಂಟ್​ ಮಾಡದಿರುವುದು ಯಾವುದು ಸರಿ ಎಂಬ ಪ್ರಶ್ನೆಗೆ ದಾರಿ ಮಾಡಿಕೊಟ್ಟಿದೆ.

ನಟ ವಿಕಿ ಕೌಶಲ್​ರ ಕಸಿನ್​ ಅಂದರೆ ಚಿಕ್ಕಪ್ಪನ ಮಗಳಾದ ಡಾ.ಉಪಾಸನಾ ವೋಹ್ರ ತಾವು ಇತ್ತೀಚೆಗೆ ತಮ್ಮ ಅಣ್ಣ ವಿಕ್ಕಿ ಜೊತೆ ಮಾತಾಡಿದ್ದು, ಮದುವೆಯ ಬಗ್ಗೆ ಅವರೇನೂ ಹೇಳಿಲ್ಲ. ಸದ್ಯಕ್ಕೆ ಮದುವೆಯಂತೂ ನಡೆಯುತ್ತಿಲ್ಲ. ಮಾಧ್ಯಮದಲ್ಲಿ ಕೇವಲ ವದಂತಿಗಳು ಹಬ್ಬಿವೆ ಎಂದಿದ್ದಾರೆಂದು ದೈನಿಕ್​ ಭಾಸ್ಕರ್​ ವರದಿ ಮಾಡಿದೆ.

ಆದಾಗ್ಯೂ ಈ ಜೋಡಿಯ ಅಭಿಮಾನಿಗಳು ಈ ಕಾಮೆಂಟನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಚಿತ್ರೋದ್ಯಮದ ಹಲವು ಗಣ್ಯರ ಹೆಸರುಗಳು ಅದಾಗಲೇ ವಿಕಿ-ಕತ್ರೀನಾ ಮದುವೆಯ ಅತಿಥಿಗಳ ಪಟ್ಟಿಯಲ್ಲಿದೆ. ಮದುವೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಿರುವ ಕಾರಣಕ್ಕೆ ಸಂಬಂಧಿಕರಿಗೂ ಗುಟ್ಟು ಬಿಟ್ಟುಕೊಡಬೇಡಿ ಎಂದು ವಿಕಿ-ಕತ್ರೀನಾ ಕೇಳಿಕೊಂಡಿದ್ದಾರೆ ಅಷ್ಟೆ ಎಂದು ಹೇಳುತ್ತಿದ್ದಾರೆ. (ಏಜೆನ್ಸೀಸ್)