ಮುಂಬೈ: 'ತಲೈವಿ' ಚಿತ್ರದ ಚಿತ್ರೀಕರಣ ಮುಗಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಇದೀಗ 'ಧಾಕಡ್' ಎಂಬ ಚಿತ್ರದಲ್ಲಿ ಮೊದಲು ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ ಬಿಡುಗಡೆ ದಿನಾಂಕವನ್ನು ಸಹ ಅವರು ಘೋಷಿಸಿದ್ದಾರೆ.
ಇದನ್ನೂ ಓದಿ: ಮತ್ತೊಮ್ಮೆ ಅತ್ಯುತ್ತಮ ನಟಿಯಾದ ಪಾವನಾ ಗೌಡ..
ಹೌದು, 'ಧಾಕಡ್' ಚಿತ್ರದ ಕೆಲಸಗಳು ಶುರುವಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸ್ಪೈ ಥ್ರಿಲ್ಲರ್ ಆಗಲಿದೆ ಎಂದು ಕಂಗನಾ ಈಗಾಗಲೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದೀಗ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿರುವ ಅವರು, ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.
'ಧಾಕಡ್' ಚಿತ್ರದಲ್ಲಿ ಕಂಗನಾ, ಏಜೆಂಟ್ ಅಗ್ನಿ ಎಂಬ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಕಿಯಂತೆ ಉರಿಯುವ ಆಕೆಗೆ ಯಾರ ಭಯವೂ ಇಲ್ಲವಂತೆ. ಪಾತ್ರ ಪರಿಚಯದ ಜತೆಗೆ, ಚಿತ್ರ ಇದೇ ವರ್ಷ ಅಕ್ಟೋಬರ್ ಒಂದರಂದು ಬಿಡುಗಡೆಯಾಗಲಿದೆ ಎಂದು ಸಹ ಘೋಷಿಸಿದ್ದಾರೆ.
ಈ ಚಿತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ನರು ಕೆಲಸ ಮಾಡುತ್ತಿದ್ದು, ಪ್ರಮುಖವಾಗಿ ಜಪಾನ್ನ ಖ್ಯಾತ ಛಾಯಾಗ್ರಾಹಕ ಟೆಟ್ಸುವೋ ನಗಾತಾ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಟೆಟ್ಸುವೋ ಮೂಲತಃ ಜಪಾನವರಾಗಿದ್ದರೂ, ಅವರು ಹೆಚ್ಚು ಕೆಲಸ ಮಾಡಿರುವುದು ಫ್ರೆಂಚ್ ಸಿನಿಮಾಗಳಲ್ಲಿ. ಅವರು ಇದೀಗ ಮೊದಲ ಬಾರಿಗೆ ಹಿಂದಿ ಚಿತ್ರವೊಂದಕ್ಕೆ ಕೆಲಸ ಮಾಡುತ್ತಿರುವುದು ವಿಶೇಷ.
ಇನ್ನು, ಈ ಚಿತ್ರವನ್ನು ಭಾರತದ ಜನಪ್ರಿಯ ಜಾಹೀರಾತು ನಿರ್ದೇಶಕ ರಜನೀಶ್ ಘಾಯ್ ನಿರ್ದೇಶನ ಮಾಡುತ್ತಿದ್ದು, ಅರ್ಜುನ್ ರಾಮ್ಪಾಲ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.