ಸಿನಿವಾಣಿ

ಪ್ರಜ್ವಲ್ ಹುಟ್ಟುಹಬ್ಬಕ್ಕೆ PD 35 ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣ ...

ಬೆಂಗಳೂರು: ಜುಲೈ 4ಕ್ಕೆ ಪ್ರಜ್ವಲ್​ ದೇವರಾಜ್​ ಅವರ ಹುಟ್ಟುಹಬ್ಬ. ಕಳೆದ ಒಂದು ವರ್ಷದಿಂದ ಸ್ಟಾರ್​ನಟರೆಲ್ಲರೂ ಕರೊನಾ ಕಾರಣದಿಂದ ಹುಟ್ಟುಹಬ್ಬವನ್ನು ಕ್ಯಾನ್ಸಲ್​ ಮಾಡಿದ ವಿಷಯ ಗೊತ್ತೇ ಇದೆ. ಪ್ರಜ್ವಲ್​ ಸಹ ತಮ್ಮ ಹುಟ್ಟುಹಬ್ಬವನ್ನು ಕ್ಯಾನ್ಸಲ್​ ಮಾಡುವ ಕುರಿತಾಗಿ ಸದ್ಯದಲ್ಲೇ ಮನವಿ ಮಾಡಿಕೊಳ್ಳುವ ನಿರೀಕ್ಷೆ ಇದೆ.

ಈ ಬಾರಿ ಪ್ರಜ್ವಲ್​ಗೆ ಅಭಿಮಾನಿಗಳ ಜತೆಗೆ ಹುಟ್ಟುಹಬ್ಬದ ಆಚರಣೆ ಇಲ್ಲದಿರಬಹುದು. ಆದರೆ, ಪ್ರಜ್ವಲ್​ ಅಭಿನಯದ ಚಿತ್ರತಂಡಗಳು ತಮ್ಮದೇ ರೀತಿಯಲ್ಲಿ ಪ್ರಜ್ವಲ್​ ಹುಟ್ಟಹಬ್ಬವನ್ನು ಆಚರಿಸುತ್ತಿದ್ದಾರೆ. 'ವೀರಂ', 'ಅರ್ಜುನ್​ ಗೌಡ' ಮುಂತಾದ ಚಿತ್ರತಂಡಗಳು ಹುಟ್ಟುಹಬ್ಬಕ್ಕೆ ಪೋಸ್ಟರ್​ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇನ್ನು, PD 35 ಚಿತ್ರತಂಡ ಸಹ ಪ್ರಜ್ವಲ್ ಅವರಿಗೆ ಸರ್ಪ್ರೈಸ್ ಗಿಫ್ಟ್ ನೀಡುವುದಕ್ಕೆ ಸಜ್ಜಾಗಿದೆ. PD 35 ಅಂದರೆ ಪ್ರಜ್ವಲ್ ದೇವರಾಜ್ 35 ಎಂದರ್ಥ. ಇದು ಅವರ ಅಭಿನಯದ 35ನೇ ಚಿತ್ರವಾಗಿರುವುದರಿಂದ ಸದ್ಯಕ್ಕೆ ಆ ಹೆಸರಿನಲ್ಲೇ ಕೆಲಸಗಳು ನಡೆದಿದೆ. ಅಂದು ಈ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣಗೊಳ್ಳಲಿದೆ. ಸದ್ಯಕ್ಕೆ ಒಂದು ಪೋಸ್ಟರ್​ ಬಿಡುಗಡೆ ಮಾಡಲಾಗಿದ್ದು, ಈ ಪೋಸ್ಟರ್​ ಸಾಕಷ್ಟು ಕುತೂಹಲ ಕೆರಳಿಸಿದೆ. ಇಲ್ಲಿ ನಾಯಕನ ಕೈಗೆ ಬೇಡಿಯೊಂದನ್ನು ಹಾಕಲಾಗಿದ್ದು, ಏನು, ಯಾಕೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ಅವರು ನಿರ್ಮಿಸುತ್ತಿರುವ ಈ‌ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ‌. ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ‌ ಪ್ರಭುದೇವ ನಟಿಸುತ್ತಿದ್ದಾರೆ. ಮಿಕ್ಕಂತೆ, ಭಾನುವಾರ ಚಿತ್ರದ ಹೆಸರು ಮತ್ತು ಫಸ್ಟ್​ಲುಕ್​ ಪೋಸ್ಟರ್​ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಗುರುದತ್​ ಗಾಣಿಗ ತಿಳಿಸಿದ್ದಾರೆ.