ಸಿನಿವಾಣಿ

ಹಲೋ ಡ್ಯಾಡಿ ಸಿನಿಮಾ ಖ್ಯಾತಿಯ ನಟ ನಿತಿನ್‌ ಗೋಪಿ ಹೃದಯಾಘಾತದಿಂದ ನಿಧನ

ಬೆಂಗಳೂರು: ದಿವಂಗತ ನಟ ಡಾ.ವಿಷ್ಣುವರ್ಧನ್​ ಅಭಿನಯದ ಹಲೋ ಡ್ಯಾಡಿ ಸಿನಿಮಾದಲ್ಲಿ ಬಾಲ ನಟನಾಗಿ ಅಮೋಘವಾಗಿ ನಟಿಸುವ ಮೂಲಕ ಕನ್ನಡಿಗರಲ್ಲಿ ಮನೆ ಮಾತಾಗಿದ್ದ ನಟ ಹಾಗೂ ನಿರ್ದೇಶಕ ನಿತಿನ್​ ಗೋಪಿ (39) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ನಿತಿನ್ ಗೋಪಿ ಅವರು ಬಾಲನಟನಾಗಿ ಕನ್ನಡ ಸಿನಿಮಾ ಪ್ರಿಯರಿಗೆ ಹೆಚ್ಚು ಪರಿಚಿತರಾಗಿದ್ದರು. 'ಹಲೋ ಡ್ಯಾಡಿ' ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಮಗನಾಗಿ ಕಾಣಿಸಿಕೊಂಡಿದ್ದ ನಿತಿನ್, "ಶಾಲೆಗೆ ಈ ದಿನ ರಜಾ" ಹಾಡಿನ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಉಳಿದುಕೊಂಡಿದ್ದಾರೆ.

ನಿತಿನ್ ಅವರಿಗೆ ಇಟ್ಟಮಡುವಿನ ಅಪಾರ್ಟ್‌ಮೆಂಟ್‌ನಲ್ಲಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಗಿದೆ. ಆದರೆ ಮಾರ್ಗ ಮಧ್ಯದಲ್ಲೇ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

'ನಿಶಬ್ಧ', 'ಕೆರಳಿದ ಕೇಸರಿ', 'ಚಿರಬಾಂದವ್ಯ', 'ಮುತ್ತಿನಂಥ ಹೆಂಡತಿ', ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಿತಿನ್ ಬಾಲನಟನಾಗಿ ನಟಿಸಿದ್ದರು. ಮುಂಬೈನಲ್ಲಿ ಚಿತ್ರೀಕರಣಗೊಂಡ 'ಹರ ಹರ ಮಹದೇವ' ಧಾರಾವಾಹಿಯ ಹಲವು ಸಂಚಿಕೆಗಳನ್ನು ಹಾಗೂ ತಮಿಳು ಧಾರಾವಾಹಿಯೊಂದನ್ನು ನಿರ್ದೇಶಿಸಿದ್ದಾರೆ. ಬಾಲಾಜಿ ಟೆಲಿಫಿಲ್ಮ್ಸ್ ಹಾಗೂ ಶ್ರುತಿ ನಾಯ್ಡು ಅವರ ಕೆಲ ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದು, ಹೊಸ ಧಾರಾವಾಹಿಯೊಂದರ ನಿರ್ದೇಶನಕ್ಕೆ ಸಿದ್ಧತೆ ನಡೆಸಿದ್ದದ್ದರು.