ಸಿನಿವಾಣಿ

ಬ್ಲಾಕ್​ ಬುಕ್ಕಿಂಗ್​, ಉಚಿತ ಟಿಕೆಟ್​ ಹಂಚಿಕೆ... ಬಾಲಿವುಡ್​ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಸಿನಿ ವಿಮರ್ಶಕ! Komal Nahta

Komal Nahta : ಬಾಲಿವುಡ್​ ಸಿನಿಮಾ ರಂಗದಲ್ಲಿ ಬಾಕ್ಸ್​ಆಫೀಸ್​ ಕೆಲೆಕ್ಷನ್​ ಹಿಂದಿರುವ ಕೆಲ ಕೈಚಳಕದ ಬಗ್ಗೆ ಖ್ಯಾತ ಸಿನಿಮಾ ವಿಮರ್ಶಕ ಕೋಮಲ್ ನಹತಾ ಅವರು ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.

ಕೋಮಲ್​ ನಹತಾ ಅವರು ಎಎನ್​ಐ ಸುದ್ದಿ ಸಂಸ್ಥೆಯ ಪಾಡ್​ಕಾಸ್ಟ್​ ವಿತ್​ ಸ್ಮಿತಾ ಪ್ರಕಾಶ್​ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ಬಾಲಿವುಡ್​ ಸಿನಿಮಾ ರಂಗದ ಅಂತ್ಯಂತ ಕೆಟ್ಟ ಟ್ರೆಂಡ್​ ಬಗ್ಗೆ ಮಾತನಾಡಿದರು.

ಬಾಕ್ಸ್​ಆಫೀಸ್​ನಲ್ಲಿ ನಡೆಯುವ ನಂಬರ್​ಗಳ ಕೈಚಳಕದ ಬಗ್ಗೆ ಏನು ಹೇಳುತ್ತೀರಾ?ಥಿಯೇಟರ್​ಗಳಲ್ಲಿ ಎರಡರಿಂದ ಐದು ಮಂದಿ ಮಾತ್ರ ಕುಳಿರಿತುತ್ತಾರೆ ಆದರೆ, ಸೂಪರ್​ಡೂಪರ್​ ಹಿಟ್​ ಎಂದು ಹೇಳುತ್ತಾರೆ. ಈ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದು ತಪ್ಪಲ್ಲವೇ? ಯಾವಾಗ ಈ ಟ್ರೆಂಡ್​ ಶುರುವಾಯಿತು? ಇದನ್ನು ಖಂಡಿತವಾಗಿ ನಿಲ್ಲಿಸಬೇಕು. ಇದು ಸರಿಯಲ್ಲ. ಈ ಬಗ್ಗೆ ನೀವು ಏನು ಹೇಳ್ತೀರಾ ಎಂದು ನಿರೂಪಕಿ ಸ್ಮಿತಾ ಪ್ರಕಾಶ್​ ಕೇಳಿದರು.

ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿನಿಮಾ ವಿಮರ್ಶಕ ಕೋಮಲ್​ ನಹತಾ, ಇದು ಹಲವು ವರ್ಷಗಳ ಹಿಂದೆಯೇ ಶುರುವಾಗಿದೆ. ಆದರೆ, ಆ ಸಮಯದಲ್ಲಿ ಅದು ಹಿಟ್ಟಿನಲ್ಲಿರುವ ಉಪ್ಪಿನಂತೆ ಇತ್ತು. ಆದರೆ, ಈಗ ಅದು ಸಂಪೂರ್ಣ ಹಿಟ್ಟೇ ಆಗಿದೆ. ಸಿನಿಮಾ ರಂಗದಲ್ಲಿ ಶೇ. 2 ರಷ್ಟು ಕೈಚಳಕವನ್ನು ನಾನು ಒಪ್ಪುತ್ತೇನೆ. ಆದರೆ, ಶೇ. 98 ರಷ್ಟು ಅಥವಾ 50 ರಷ್ಟು ಕೈಚಳಕ ಅನ್ನೋದು ನನಗೆ ಅರ್ಥವಾಗುತ್ತಿಲ್ಲ ಎಂದರು.

ಯಾರು ಇದನ್ನು ಮಾಡುತ್ತಿದ್ದಾರೋ ಅವರೆಲ್ಲ ಬ್ಲಾಕ್​ ಬುಕ್ಕಿಂಗ್​ ಮಾಡುತ್ತಿದ್ದಾರೆ. 500 ಟಿಕೆಟ್​​ಗಳನ್ನು ನೀಡುತ್ತೇನೆ. ನನ್ನ ಸಿನಿಮಾ ರಿಲೀಸ್​ ಆಗುತ್ತಿದೆ ನೀವು ಟಿಕೆಟ್​ಗಳನ್ನು ಉಚಿತವಾಗಿ ಹಂಚಿ ಎಂದು ಹೇಳುತ್ತಾರೆ. ಆದರೆ, ಒಂದು ನಿಜ ಹೇಳುತ್ತೇನೆ. ಕೆಲವೇ ಮಂದಿ ಆ ರೀತಿ ಸಿನಿಮಾ ನೋಡಬಹುದು. ಆದರೆ, ಸಿನಿಮಾ ಚೆನ್ನಾಗಿಲ್ಲ ಅಂದರೆ, ಉಚಿತವಾಗಿ ಟಿಕೆಟ್​ ಕೊಟ್ಟರು ಕೂಡ ಜನ ನೋಡುವುದಿಲ್ಲ. ಒಂದು ವೇಳೆ ಸಿನಿಮಾ ಚೆನ್ನಾಗಿದ್ದರೆ, ಟಿಕೆಟ್​ ಬೆಲೆ 1000 ರೂಪಾಯಿ ಇದ್ದರೂ ಜನರು ನೋಡುತ್ತಾರೆ ಎಂದರು.

ಮೊದಲನೆಯದಾಗಿ ಈ ಬ್ಲಾಕ್​ ಬುಕ್ಕಿಂಗ್​ ಯಾರು ಮಾಡುತ್ತಿದ್ದಾರೋ ಅದು ಸಂಪೂರ್ಣ ತಪ್ಪು. ಆದರೆ, ಕೆಲವರು ಇದರಲ್ಲಿ ಅಂಥಾ ತಪ್ಪೇನಿದೆ ಎಂದು ಹೇಳುತ್ತಾರೆ ಮತ್ತು ಇದೊಂದು ಪ್ರಚಾರದ ತಂತ್ರ ಎನ್ನುತ್ತಾರೆ. ಹಾಗಾದರೆ, ನಾಳೆ ಐದು ಜನರನ್ನು ಕೊಲ್ಲಿ ಎಂದು ಹೇಳ್ತೀರಿ. ಎಲ್ಲಿ ರಕ್ತ ಹರಿಯುತ್ತದೆಯೋ ಅದನ್ನು ನೋಡಲು ಜನರು ಸೇರುತ್ತಾರೆ. ಆ ಜನರಲ್ಲಿ ಶೇ. 80ರಷ್ಟು ಮಂದಿ ಸಿನಿಮಾ ನೋಡಲು ಹೋಗುತ್ತಾರೆ ಅಂತ ನೀವು ಹೇಳ್ತೀರಿ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದ ಕೋಮಲ್ ನಹತಾ, ಒಂದೇ ರಾತ್ರಿಯಲ್ಲಿ ನೀವು ಪ್ರಮೋಷನ್​ ವಾಕ್ಯವನ್ನು ಬದಲಿಸಲು ಆಗುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ತಾನಾಗಿಯೇ ಪ್ರಚಾರ ಪಡೆದುಕೊಳ್ಳುತ್ತದೆ. ಅದನ್ನು ಬಿಟ್ಟು ಬ್ಲಾಕ್​ ಬುಕ್ಕಿಂಗ್​ ಮಾಡಿಸುವುದು, 5000 ಟಿಕೆಟ್​ ಖರೀದಿ ಮಾಡಿ, ಉಚಿತವಾಗಿ ಹಂಚಿ ಸಿನಿಮಾ ನೋಡಿ ಅಂತ ಹೇಳುವುದು ಸರಿಯಲ್ಲ ಎಂದರು.

ಸ್ಕೈಫೋರ್ಸ್​ ಸಿನಿಮಾದ ಮೊದಲ ವಾರದ ನಿಖರವಾದ ಕಲೆಕ್ಷನ್​ 40 ಕೋಟಿ. ಆದರೆ, ನಿರ್ಮಾಪಕರು ಘೋಷಣೆ ಮಾಡಿದ್ದು, 84 ಕೋಟಿ ರೂಪಾಯಿ. ನಮಗೆ ವಿತರಕರ ಜೊತೆ ನೇರ ಸಂಪರ್ಕ ಇರುತ್ತದೆ. ಹೀಗಾಗಿ ಅಂಕಿ ಅಂಶಗಳು ನಿಖರವಾಗಿ ತಿಳಿದಿರುತ್ತದೆ. ಕೆಲವರು ಚಿತ್ರಮಂದಿರ ಅರ್ಧ ತುಂಬಿದ್ದರೂ ಸಿನಿಮಾ ಮಾಲೀಕರಿಗೆ ಹಣ ಕೊಟ್ಟು ಹೌಸ್​ಫುಲ್​ ಬೋರ್ಡ್​ ಹಾಕಿಸುತ್ತಾರೆ ಎನ್ನುವ ಮೂಲಕ ಕೋಮಲ್​ ನಾಥ್​ ಅವರು ಬಾಲಿವುಡ್​ ಸಿನಿಮಾ ರಂಗದಲ್ಲಿ ನಡೆಯುವ ಕೆಲ ವಂಚನೆಗಳನ್ನು ಬಯಲಿಗೆ ಎಳೆದರು. ಸ್ಟಾರ್​ ನಟರ ಸಿನಿಮಾಗಳಲ್ಲೇ ಈ ಕೆಟ್ಟ ಟ್ರೆಂಡ್​ ಇದೆ ಎಂದರು.

ಯಾವಾಗ ಕೋಮಲ್​ ನಹತಾ ಅವರ ಹೇಳಿಕೆ ವೈರಲ್​ ಆಯ್ತೋ ಅನೇಕ ಮಂದಿ ಶಾರುಖ್​ ಖಾನ್​, ಸಲ್ಮಾನ್​ ಖಾನ್​ ಮತ್ತು ಅಮೀರ್ ಖಾನ್​ ಸಿನಿಮಾಗಳತ್ತ ಬೊಟ್ಟು ಮಾಡುತ್ತಿದ್ದಾರೆ. ಫೇಕ್​ ಕಲೆಕ್ಷನ್​ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಕಾಮೆಂಟ್​ ಮೂಲಕ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.