ಸಿನಿವಾಣಿ

ಪ್ಯಾನ್​ ಇಂಡಿಯಾ ಹೇಳಿಕೆಗೆ ಜಗ್ಗೇಶ್​ ಕಾಲೆಳೆದ ಅಭಿಮಾನಿಗಳು!

ಬೆಂಗಳೂರು: ಪ್ಯಾನ್ ಇಂಡಿಯಾ ಸಂಸ್ಕೃತಿಯಿಂದ ಯಾರೂ ಉದ್ಧಾರ ಆಗುವುದಿಲ್ಲ ಎಂಬ ಜಗ್ಗೇಶ್​ ಅವರ ಮಾತಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಮಂಗಳವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಜಗ್ಗೇಶ್​ ಪ್ಯಾನ್​ ಇಂಡಿಯಾ ಚಿತ್ರಗಳ ಕುರಿತು ಮಾತನಾಡಿದ್ದರು. 'ಪ್ಯಾನ್ ಇಂಡಿಯಾ ಎಂಬ ಸಂಸ್ಕೃತಿ ನಮ್ಮನ್ನು ಹಾಳು ಮಾಡುತ್ತಿದೆ. ಪ್ಯಾನ್ ಇಂಡಿಯಾ ಹೆಸರಲ್ಲಿ ಬೇರೆ ಭಾಷೆಯ ಚಿತ್ರಗಳು ಕನ್ನಡದಲ್ಲಿ ಬಿಡುಗಡೆ ಆಗುತ್ತಿವೆ. ಇದರಿಂದ ಯಾರೂ ಉದ್ಧಾರ ಆಗುವುದಿಲ್ಲ, ಯಾರಿಗೂ ಅವಕಾಶ ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಬೇರೆಯವರ ಹತ್ತಿರ ಹೋಗಿ ಬೇಡುವ ಪರಿಸ್ಥಿತಿ ಬರುತ್ತದೆ. ಮೊದಲು ನಮ್ಮತನ ಉಳಿಸಿಕೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ಭಾರೀ ಕಷ್ಟವಿದೆ' ಎಂದು ಜಗ್ಗೇಶ್ ಹೇಳಿದ್ದರು.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಸುದೀಪ್​, ದರ್ಶನ್​, ಯಶ್​, ಉಪೇಂದ್ರ ಸೇರದಿಂತೆ ಹಲವು ಸ್ಟಾರ್​ ನಟರ ಚಿತ್ರಗಳು ಪ್ಯಾನ್​ ಇಂಡಿಯಾ ಬಿಡುಗಡೆಯಾಗಿವೆ. ಜಗ್ಗೇಶ್​ ಅವರು ಈ ಹೇಳಿಕೆಯಿಂದ ತಮ್ಮ ಮೆಚ್ಚಿನ ನಟರಿಗೆ ಅವಮಾನ ಮಾಡಿದ್ದಾರೆ ಎಂದು ಸ್ಟಾರ್​ ನಟರ ಅಭಿಮಾನಿಗಳು ಜಗ್ಗೇಶ್​ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಜಗ್ಗೇಶ್​ ವಿರುದ್ಧ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ.

ಕನ್ನಡ ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವುದೇ ಈ ಪ್ಯಾನ್​ ಇಂಡಿಯಾ ಸಂಸ್ಕೃತಿಯಿಂದ. ಹಾಗಾಗಿ ಅದರ ಬಗ್ಗೆ ಕೀಳಾಗಿ ಮಾತನಾಡುವುದು ಜಗ್ಗೇಶ್​ ಅವರಂಥ ಹಿರಿಯ ನಟರಿಗೆ ಶೋಭೆ ತರುವುದಿಲ್ಲ ಎಂದು ಹಲವು ನಟರ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, ಜಗ್ಗೇಶ್​ ಅವರ ಮಾತಿಗೆ ತಮ್ಮದೇ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.