

ಬೆಂಗಳೂರು: ‘ನಿನ್ನ ಕೆಲಸ ನಟನೆ ಮಾಡುವುದು. ಹೋಗಿ ನಟನೆ ಮಾಡಿ ಬಾ ಅಂತ ಅಪ್ಪ ಹೇಳಿದ್ದರು. ಅದು ನನಗೆ ಮಂತ್ರವಾಗಿ ಬಿಟ್ಟಿತ್ತು. ಹಾಗಾಗಿ ಯಾವತ್ತೂ ಪ್ರಶ್ನೆ ಮಾಡುವುದಕ್ಕೆ ಹೋಗಲಿಲ್ಲ. ಬಂದ ಚಿತ್ರಗಳೆಲ್ಲವನ್ನೂ ಮಾಡಿದೆ. ಬಹುಶಃ ..’ ಎಂದು ಒಂದು ಕ್ಷಣ ಮೌನವಾದರು ವಿಜಯ್ ರಾಘವೇಂದ್ರ. ಬಹುಶಃ ಅದೇ ಕಾರಣಕ್ಕೆ ಅವರು ಹಲವು ಚಿತ್ರಗಳಲ್ಲಿ ನಟಿಸಿದರೂ, ದೊಡ್ಡ ಯಶಸ್ಸು ಕಾಣುವುದಕ್ಕೆ ಸಾಧ್ಯವಾಗಲೇ ಇಲ್ಲ ಎಂದರೆ ತಪ್ಪಿಲ್ಲ. ವಿಜಯ್ ಓಟಕ್ಕೆ ಅವರ ಸೌಜನ್ಯ, ಸಂಕೋಚದ ಸ್ವಭಾವ, ಗೊಂದಲಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಲುವು ತೆಗೆದುಕೊಳ್ಳದಿರುವುದೇ ಮುಳುವಾಯಿತು ಎಂದರೂ ತಪ್ಪಿಲ್ಲ. ಅದನ್ನು ಅವರು ಸಹ ಒಪ್ಪಿಕೊಳ್ಳುತ್ತಾರೆ.
‘ಯಾವ ತರಹದ ಸಿನಿಮಾ ಮಾಡಬೇಕು, ಯಾವ ತರಹದ ಸಿನಿಮಾ ಒಪ್ಪಿಕೊಂಡರೆ ಒಳಿತಾಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಬೇರೆಯವರ ವಿಷಯದಲ್ಲಿ ತಲೆ ಹಾಕಬೇಡ, ನಿನ್ನ ಕೆಲಸ ನೀನು ಮಾಡು ಎಂದು ಅಪ್ಪಾಜಿ ಹೇಳಿದ ಮಾತು ಮನಸ್ಸಿನಲ್ಲಿತ್ತು. ಒಂದರ ಹಿಂದೊಂದು ಚಿತ್ರಗಳಲ್ಲಿ ನಟಿಸುತ್ತ ಹೋದೆ. ತಪು್ಪ ಆಯ್ಕೆ, ಗೊಂದಲದಿಂದ ಹಲವು ಚಿತ್ರಗಳು ಸೋತವು. ಸಂಕೋಚ ಮತ್ತು ನೇರವಾಗಿ ಕೇಳಲಿಕ್ಕಾಗದಿದ್ದರಿಂದ ಸೋಲನುಭವಿಸಬೇಕಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ವಿಜಯ್.
ಈಗ ಅವೆಲ್ಲದರಿಂದ ಆಚೆ ಬಂದಿರುವ ವಿಜಯ್ ಬಹಳ ಹುಷಾರಾಗಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರಂತೆ. ‘ಎಲ್ಲಿ ತಪು್ಪ ಮಾಡುತ್ತಿದ್ದೀನಿ ಅಂತ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ನನಗೆ ಕಮಾಂಡ್ ಮಾಡೋಕೆ ಆಗುತ್ತಿರಲಿಲ್ಲ. ಹಾಗಾಗಿ ಕೆಲವು ಚಿತ್ರಗಳನ್ನು ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳುತ್ತಿದ್ದೆ. ಈಗ ಹಾಗಿಲ್ಲ. ಎಷ್ಟೇ ಸಂಕೋಚವಿದ್ದರೂ, ನಯವಾಗಿಯೇ ಬೇಕು, ಬೇಡ ಎಂದು ಹೇಳುತ್ತೇನೆ. ಏಕೆಂದರೆ, ಒಂದು ಚಿತ್ರ ಅಥವಾ ಪಾತ್ರ ನನಗೆ ಸೂಟ್ ಆಗಲಿಲ್ಲ ಎಂದರೆ ನಾಲ್ಕು ವರ್ಷ ಹಿಂದಕ್ಕೆ ಹೋದಂತೆ. ಆ ತರಹದ ಚಿತ್ರ ಮಾಡಿ ಏನು ಪ್ರಯೋಜನ? ಹಾಗಾಗಿ ಬಂದ ಎಲ್ಲ ಚಿತ್ರಗಳನ್ನು ಒಪು್ಪವುದಿಲ್ಲ. ಅದರಲ್ಲೂ ಯಾರಾದರೂ ಆರಂಭದಲ್ಲೇ, ಒಂದು ಮರ್ಡರ್ ಆಗುತ್ತೆ ಅಥವಾ ದೆವ್ವ ಬರುತ್ತೆ ಎಂದರೆ ಬೇಡ ಅಂದುಬಿಡುತ್ತೀನಿ. ಮನಸ್ಸಿಗೆ ಹತ್ತಿರವಾಗುವ, ವಿಭಿನ್ನವಾಗಿರು ವಂತಹ ಚಿತ್ರಗಳನ್ನು ಮಾತ್ರ ಒಪ್ಪಿ ಕೊಳ್ಳುತ್ತಿದ್ದೀನಿ’ ಎನ್ನುತ್ತಾರೆ ವಿಜಯ್.