ಬೆಂಗಳೂರು: ತಮ್ಮ ಹೊಸ ಸಿನಿಮಾ ಬಿಡುಗಡೆಯಾದ ದಿನವೇ ನಟ ಧನ್ವೀರ್ ಗೌಡ ಅವರಿಗೆ ಒಂದು ಕಹಿ ಘಟನೆ ಎದುರಾಗಿದೆ. ಹೌದು, ಧನ್ವೀರ್ ಅಭಿನಯಿಸಿರುವ ‘ಬೈ ಟು ಲವ್’ ಚಿತ್ರ ಇಂದು ಅಂದರೆ ಫೆಬ್ರವರಿ 18 ರಂದು ರಿಲೀಸ್ ಆಗಿದೆ. ಇದರ ಜತೆಗೆ ಇಂದೇ ನಟನ ವಿರುದ್ಧ ಹಲ್ಲೆ ಆರೋಪದಿಂದ ದೂರು ದಾಖಲಾಗಿದೆ. ಸದ್ಯ, ಒಬ್ಬ ಬೌನ್ಸರ್ ಜತೆ ಸೇರಿ ಚಂದ್ರಶೇಖರ್ ಎಂಬ ಅಭಿಮಾನಿ ಮೇಲೆ ಹಲ್ಲೆ ಮಾಡಿದ ಆರೋಪ ಧನ್ವೀರ್ ವಿರುದ್ಧ ಕೇಳಿಬಂದಿದೆ. ನಟ ಧನ್ವೀರ್ ತಮ್ಮನ್ನು ಥಳಿಸಿರುವ ಆರೋಪವನ್ನು ಮಾಡಿದ್ದಾರೆ ಚಂದ್ರಶೇಖರ್. ಹಲ್ಲೆಗೊಳಗಾದ ಚಂದ್ರಶೇಖರ್ ಅವರು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದಾರೆ. ಇದರಿಂದ ನಟನಿಗೆ ಸಂಕಷ್ಟ ಎದುರಾಗಿದೆ.
ನಟ ಧನ್ವೀರ್ ಅವರು ಈ ಘಟನೆಯ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂದಹಾಗೆ, ಬೆಂಗಳೂರಿನ ಎಸ್.ಸಿ. ರಸ್ತೆಯ ಅನುಪಮಾ ಥಿಯೇಟರ್ ಬಳಿ ಫೆಬ್ರವರಿ 17 ರಂದು ತಡರಾತ್ರಿ ಈ ಘಟನೆ ನಡೆದಿದೆ. ಸ್ನೇಹಿತನ ಜೊತೆ ಊಟ ಮುಗಿಸಿ ಚಂದ್ರಶೇಖರ್ ಮನೆಗೆ ತೆರಳುತ್ತಿದ್ದರು. ಆಗ, ನಟ ಧನ್ವೀರ್ ಅವರನ್ನು ಕಂಡಾಗ ಫೋಟೋ ತೆಗೆಸಿಕೊಳ್ಳೋಕೆ ಚಂದ್ರಶೇಖರ್ ಕೇಳಿಕೊಂಡಾಗ ಧನ್ವೀರ್ ಅವರು ಸ್ಪಂದಿಸಲಿಲ್ಲ ಎನ್ನಲಾಗಿದೆ. ಆಗ ಚಂದ್ರಶೇಖರ್ ನಟನ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ ಕಾರಣ, ಕೋಪಗೊಂಡ ನಟ ಧನ್ವೀರ್ ಬೌನ್ಸರ್ ಜತೆ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.