ಸಿನಿವಾಣಿ

ಕ್ರೇಜಿಸ್ಟಾರ್ ರವಿಚಂದ್ರನ್​ ಹೆಸರಿನಲ್ಲಿ ನಕಲಿ ಟ್ವಿಟರ್​ ಖಾತೆ!

ಬೆಂಗಳೂರು: ಸಿನಿಮಾ ತಾರೆಯರಿಗೂ ಸಾಮಾಜಿಕ ಜಾಲತಾಣಗಳಿಗೂ ಅವಿನಾಭಾವ ನಂಟು. ಸಿನಿಮಾ, ವೈಯಕ್ತಿಕ ಹೀಗೆ ಎಲ್ಲವನ್ನೂ ಅಭಿಮಾನಿಗಳ ಜತೆ ಹಂಚಿಕೊಳ್ಳುವುದಕ್ಕಿರುವ ಬೃಹತ್ ವೇದಿಕೆ ಅದು. ಒಂದಷ್ಟು ಜನ ಜಾಲತಾಣಗಳ ಬಳಕೆಯಲ್ಲಿ ಮುಂದಿದ್ದರೆ, ಮತ್ತೆ ಕೆಲವರು ಅಷ್ಟಕಷ್ಟೇ. ಇನ್ನೊಂದಿಷ್ಟು ಮಂದಿ ಅದರ ಸಹವಾಸವೇ ಬೇಡ ಗುರು ಎಂದವರಿದ್ದಾರೆ. ಇದೆಲ್ಲವನ್ನೇ ಎನ್​ಕ್ಯಾಷ್ ಮಾಡಿಕೊಳ್ಳುವ ಕೆಲ ಫೇಕ್ ಗ್ರೂಪ್​ಗಳು, ಕಲಾವಿದರ ಹೆಸರಲ್ಲಿ ಖಾತೆ ತೆರೆದು ಅಫಿಷಿಯಲ್ ಎಂದು ಹೇಳಿಕೊಂಡಿರುತ್ತವೆ. ಅಂತ ಸಾಕಷ್ಟು ಖಾತೆಗಳು ಈಗಲೂ ಚಾಲನೆಯಲ್ಲಿವೆ. ಈಗ ಆ ಕ್ರೇಜಿಸ್ಟಾರ್ ರವಿಚಂದ್ರನ್​ ಹೆಸರಿನಲ್ಲೂ ಫೇಕ್ ಟ್ವಿಟರ್ ಖಾತೆ ಸೃಷ್ಟಿಸಲ್ಪಟ್ಟಿದೆ.

ಹೌದು, ಇತ್ತೀಚೆಗಷ್ಟೇ ಸರಳವಾಗಿ ಮನೆಯಲ್ಲೇ ಬರ್ತ್​ಡೇ ಆಚರಿಸಿಕೊಂಡಿದ್ದ ಕ್ರೇಜಿಸ್ಟಾರ್ ರವಿಚಂದ್ರನ್​ಗೆ ಇಡೀ ಕರುನಾಡು ಶುಭಾಶಯ ಕೋರಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಬಹುತೇಕ ಎಲ್ಲ ಸ್ಟಾರ್ ಕಲಾವಿದರು ನೆಚ್ಚಿನ ನಟನಿಗೆ ಬಗೆಬಗೆಯ ರೀತಿಯಲ್ಲಿ ವಿಶ್​ ಮಾಡಿದ್ದಾರೆ. ಹೀಗೆ ಶನಿವಾರ ಜನ್ಮದಿನ ಮುಗಿಯುತ್ತಿದ್ದಂತೆ, ತಾರೆಯರ ಸಂದೇಶಗಳಿಗೆ ಸ್ವತಃ ರವಿಚಂದ್ರನ್​ ಟ್ವಿಟರ್​ನಲ್ಲಿ ಧನ್ಯವಾದ ಅರ್ಪಿಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದ ನಿರ್ದೇಶಕ ರಘುರಾಮ್​, ನೇರವಾಗಿ ರವಿಚಂದ್ರನ್​ಗೆ ಕರೆ ಮಾಡಿ, ಟ್ವಿಟರ್ ಖಾತೆ ತೆರೆದಿರುವ ಬಗ್ಗೆ ಮಾತನಾಡಿದ್ದಾರೆ. ಆಗ ನನ್ನದ್ಯಾವುದೂ ಸೋಷಿಯಲ್​ ಮೀಡಿಯಾ ಅಕೌಂಟ್​ ಇಲ್ಲ ಎಂದಿದ್ದಾರೆ. ಆ ವಿಚಾರವನ್ನೇ ರಘುರಾಮ್​ ಟ್ವಿಟರ್​ನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿ, ‘ವೀರಾಸ್ವಾಮಿ ರವಿಚಂದ್ರನ್​ ಹೆಸರಿನಲ್ಲಿರುವ ಖಾತೆ ಫೇಕ್​. ದಯವಿಟ್ಟು ಯಾರೂ ಅದನ್ನು ಫಾಲೋ ಮಾಡಬೇಡಿ ಎಂದಿದ್ದಾರೆ.

ಸದ್ಯ ಈ ಫೇಕ್​ ಅಕೌಂಟ್​ನಲ್ಲಿ 1600ಕ್ಕೂ ಅಧಿಕ ಫಾಲೋವರ್ಸ್​ಗಳಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಒಂದಷ್ಟು ಜನ ಅನ್​ಫಾಲೋ ಮಾಡಿದ್ದಾರೆ.