ತಿರುವನಂತಪುರಂ: ವಿವಾಹೇತರ ಸಂಬಂಧಗಳನ್ನು ದೂಷಿಸುವಂತಿಲ್ಲ. ಅಂತಹ ಸಂಬಂಧಗಳಲ್ಲಿ ತೊಡಗಿರುವವರ ದೃಷ್ಟಿಕೋನದಿಂದ ಅದು ಸರಿ ಅನಿಸುತ್ತದೆ. ಕೆಲವೊಂದು ಸನ್ನಿವೇಶಗಳು ಅಂತಹ ಸಂಬಂಧಗಳಿಗೆ ಕಾರಣವಾಗುತ್ತವೆ ಎಂದು ಖ್ಯಾತ ಮಲಯಾಳಂ ನಟಿ ಶೀಲು ಅಬ್ರಹಾಂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶೀಲು ಅಬ್ರಹಾಂ, ವೈವಾಹಿಕ ಜೀವನದಲ್ಲಿನ ದೋಷಗಳು ವಿವಾಹೇತರ ಸಂಬಂಧಗಳಿಗೆ ಕಾರಣವಾಗಬಹುದು. ಅದನ್ನು ದೂಷಿಸಲು ಸಾಧ್ಯವಿಲ್ಲ. ಇದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಅತ್ಯಾಚಾರ ತಪ್ಪು. ಆದರೆ, ಇಷ್ಟಪಟ್ಟು ಹೋಗುವುದರಲ್ಲಿ ತಪ್ಪೇನಿಲ್ಲ. ಇಷ್ಟಪಟ್ಟು ಹತ್ತು ಬಾರಿ ಹೋದ ಮೇಲೆ ನನ್ನ ಮೇಲೆ ಬಲಾತ್ಕಾರವಾಯಿತು ಎಂದು ಹೇಳುವುದು ಸರಿಯಲ್ಲ. ಚಿತ್ರರಂಗದಲ್ಲಿ ಗಂಡು-ಹೆಣ್ಣಿನ ನಡುವಿನ ಸಂಬಂಧ ನೇರವಾಗಿ ಜನರಿಗೆ ಗೊತ್ತಿರದಿದ್ದರೂ ತಿಳಿವಳಿಕೆ ಇದೆ. ಎಷ್ಟೋ ವರ್ಷಗಳಿಂದ ಪರಿಚಯವಿರುವವರು ಕೂಡ ಕೇಸು ಹಾಕಿಕೊಂಡು ಬರುತ್ತಾರೆ ಎಂದು ಶೀಲು ಹೇಳಿದರು.
ಇದೇ ಸಂದರ್ಭದಲ್ಲಿ ನಿರ್ದೇಶಕ ಒಮರ್ ಲುಲುಗೆ ಸಂಬಂಧಿಸಿದ ಅತ್ಯಾಚಾರ ಪ್ರಕರಣದ ಬಗ್ಗೆಯೂ ಮಾತನಾಡಿದರು. ಒಮರ್ ಲುಲು ನಿರ್ದೇಶನದ ಬ್ಯಾಡ್ ಬಾಯ್ಸ್ ಚಿತ್ರದಲ್ಲಿ ಶೀಲು ನಟಿಸಿದ್ದಾರೆ. ಈ ಚಿತ್ರ ಓಣಂಗೆ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಒಮರ್ ಲುಲುಗೆ ಸಂಬಂಧಿಸಿದ ಪ್ರಕರಣಕ್ಕಿಂತ ಮುಂಚೆಯೇ ಚಿತ್ರ ಪ್ರಾರಂಭವಾಯಿತು. ಶೂಟಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕೋರ್ಟ್ ಕಲಾಪ ನಡೆಯುತ್ತಿರುವಾಗಲೇ ಶೂಟಿಂಗ್ ನಡೆಯುತ್ತಿತ್ತು. ಅವನೊಂದಿಗೆ ಆತ್ಮೀಯ ಸ್ನೇಹವಿದೆ. ಈ ಪ್ರಕರಣವು ಚಿತ್ರದ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದರು.
ಚಿತ್ರರಂಗದಲ್ಲಿ ಇಂತಹ ಸಂಗತಿಗಳು ಸಾಮಾನ್ಯ. ಒಮರ್ ಲುಲು ಒಳ್ಳೆಯವನೋ ಅಲ್ಲವೋ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಪುರುಷರು ಮತ್ತು ಮಹಿಳೆಯರ ನಡುವಿನ ಸಂಬಂಧಗಳು ಇಂದು ಸಾಮಾನ್ಯವಾಗಿದೆ. ಪ್ರೀತಿಸುತ್ತಿದ್ದವರ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಇಂತಹ ಪ್ರಕರಣಗಳು ದ್ವೇಷಾಸೂಯೆಗೆ ತಿರುಗುತ್ತದೆ ಎಂದು ನಟಿ ಹೇಳಿದರು. (ಏಜೆನ್ಸೀಸ್)