ಚೆನ್ನೈ: ಪ್ರಿಯಾ ಭವಾನಿ ಶಂಕರ್ ಕಾಲಿವುಡ್ ಪ್ರಖ್ಯಾತ ನಟಿಯರಲ್ಲಿ ಒಬ್ಬರು. ಇವರು ಟಿವಿ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ತಮ್ಮ ನಿರೂಪಣೆ ಶೈಲಿಯಿಂದಲೇ ಎಲ್ಲರ ಗಮನ ಸೆಳೆದರು. ಧಾರವಾಹಿಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡರು. ತಮ್ಮ ನಟನಾ ಪ್ರತಿಭೆಯನ್ನು ಪ್ರದರ್ಶಿಸಿದ ಪ್ರಿಯಾ ಭವಾನಿ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದು, ಕಾಲಿವುಡ್ ಹಾಗೂ ಟಾಲಿವುಡ್ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ತಾಜಾ ಸಂಗತಿ ಏನೆಂದರೆ, ಪ್ರಿಯಾ ಭವಾನಿ ನಟನೆಯ ಭೀಮಾ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಇದು ತೆಲುಗು ಸಿನಿಮಾ ಆಗಿದ್ದು, ಕನ್ನಡದ ಖ್ಯಾತ ನಿರ್ದೇಶಕ, ಕೊರಿಯೋಗ್ರಾಫರ್ ಹಾಗೂ ಭಜರಂಗಿ ಸಿನಿಮಾ ಖ್ಯಾತಿಯ ಹರ್ಷ ನಿರ್ದೇಶನ ಮಾಡಿದ್ದಾರೆ. ಟಾಲಿವುಡ್ ಸ್ಟಾರ್ ಗೋಪಿಚಂದ್ ಈ ಚಿತ್ರದ ನಾಯಕ ನಟ. ಇದೊಂದು ಫ್ಯಾಂಟಸಿ, ಆ್ಯಕ್ಸನ್ ಸಿನಿಮಾವಾಗಿದೆ.
ಚಿತ್ರದ ಪ್ರಚಾರ ಕೆಲಸ ಜೋರಾಗಿ ನಡೆಯುತ್ತಿದೆ. ಇದರ ಭಾಗವಾಗಿ ಪ್ರಿಯಾ ಭವಾನಿ ಶಂಕರ್ ಕೂಡ ಇತ್ತೀಚೆಗೆ ಮಾಧ್ಯಮ ಸಂದರ್ಶನವನ್ನು ನೀಡಿದ್ದು, ಈ ವೇಳೆ ಅವರು ಪ್ರಶ್ನೆ ಒಂದಕ್ಕೆ ನೀಡಿರುವ ಉತ್ತರ ಇದೀಗ ಎಲ್ಲೆಡೆ ವೈರಲ್ ಆಗಿದೆ. ನೀವು ಸಿನಿಮಾಗಳಲ್ಲಿ ಲಿಪ್ಲಾಕ್ ಮಾಡುವುದಾದರೆ ಯಾವ ನಟನೊಂದಿಗೆ ಮಾಡಲು ಬಯಸುತ್ತೀರಾ ಎಂದು ಪ್ರಶ್ನಿಸಲಾಯಿತು.
ಈ ಪ್ರಶ್ನೆಗೆ ಉತ್ತರ ನೀಡಿದ ಪ್ರಿಯಾ ಭವಾನಿ, ನನ್ನ ನೆಚ್ಚಿನ ನಟ ಅಲ್ಲು ಅರ್ಜುನ್ ಎಂದರು. ಒಂದು ವೇಳೆ ಸಿನಿಮಾದಲ್ಲಿ ರೊಮ್ಯಾನ್ಸ್ ದೃಶ್ಯವಿದ್ದರೆ, ನಾನು ಅಲ್ಲು ಅರ್ಜುನ್ ಜತೆ ಲಿಪ್ಲಾಕ್ ಮಾಡಲು ರೆಡಿ ಎಂದು ಪ್ರಿಯಾ ಭವಾನಿ ಹೇಳಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಪ್ರಿಯಾ ಭವಾನಿ ಅವರು ನಟಿಸಿದ್ದ ದೂತ ವೆಬ್ಸರಣಿ ಇತ್ತೀಚೆಗೆ ಸೂಪರ್ ಡೂಪರ್ ಹಿಟ್ ಆಗಿತ್ತು. ನಾಗಚೈತನ್ಯ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಈ ಸಿನಿಮಾ ಎಲ್ಲೆಡೆ ಒಳ್ಳೆಯ ವಿಮರ್ಶೆ ಪಡೆದುಕೊಂಡಿತು. ರತ್ನಂ ಮತ್ತು ಇಂಡಿಯನ್ 2 ಸಿನಿಮಾಗಳಲ್ಲಿ ಪ್ರಿಯಾ ಭವಾನಿ ನಟಿಸಿದ್ದಾರೆ. (ಏಜೆನ್ಸೀಸ್)