More

    ಕರ್ತವ್ಯ ಮುಗಿಸಿ ಮನೆಗೆ ಹೋಗುವಾಗ ಕೇಳಿಸಿತು ಆಕ್ರಂದನ: ಸಂಪಿಗೆ ಧುಮುಕಿ ಮಗುವನ್ನು ರಕ್ಷಿಸಿದ ಎಸ್​ಐ​

    ಬೆಂಗಳೂರು: ಪೊಲೀಸರೆಂದರೆ ಸಾಮಾನ್ಯವಾಗಿ ಮೂಗು ಮುರಿಯುವವರೇ ಹೆಚ್ಚು. ಏಕೆಂದರೆ, ಕೆಲ ಪೊಲೀಸರು ಎಸಗುವ ದೌರ್ಜನ್ಯ, ಲಂಚಗುಳಿತನ ಹಾಗೂ ಏರು ಧ್ವನಿಯಲ್ಲೇ ಮಾತನಾಡಿಸುವ ಮೂಲಕ ಜನರಲ್ಲಿ ಭಯ ಹುಟ್ಟಿಸುವುದು ಮತ್ತು ದುಡ್ಡು ಇರುವವರ ಪರ ಕೆಲಸ ಮಾಡುತ್ತಾರೆ ಎಂಬ ಆರೋಪ ಪೊಲೀಸರ ಮೇಲೆ ನಕಾರಾತ್ಮಕ ಭಾವನೆ ಉಂಟು ಮಾಡಿದೆ. ಆದರೆ, ಎಲ್ಲ ಪೊಲೀಸರು ಆ ರೀತಿ ಇರುವುದಿಲ್ಲ, ಜನಸ್ನೇಹಿಗಳಾಗಿರುತ್ತಾರೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ಒಂದು ಉತ್ತಮ ಉದಾಹರಣೆಯಾಗಿದೆ.

    ಅನೇಕ ಪೊಲೀಸರು ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವದಿಂದ ಜನರ ಸೇವೆ ಮಾಡುತ್ತಿದ್ದು ಉತ್ತಮ ಮನ್ನಣೆ ಪಡೆಯುತ್ತಿದ್ದಾರೆ. ಅಲ್ಲದೆ, ಕೆಲ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಅಪಾಯದಲ್ಲಿರುವ ಎಷ್ಟೋ ಜನ ಸಾಮಾನ್ಯರನ್ನು ರಕ್ಷಿಸಿ ಪ್ರಾಣ ಉಳಿಸುತ್ತಿದ್ದಾರೆ. ಈ ಹಿಂದೆ ಹೃದಯಾಘಾತಕ್ಕೆ ಒಳಗಾದವರನ್ನು ಸಿಪಿಆರ್ ಮಾಡಿ ರಕ್ಷಿಸಿದ ಘಟನೆಗಳು ಸಾಕಷ್ಟಿವೆ. ನಿನ್ನೆ (ಮಾರ್ಚ್​ 07) 10 ಅಡಿ ಆಳದ ನೀರಿನ ಸಂಪಿನಲ್ಲಿ ಬಿದ್ದಿದ್ದ 2 ವರ್ಷ 6 ತಿಂಗಳ ಮಗುವನ್ನು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ರಕ್ಷಣೆ ಮಾಡಿರುವ ಘಟನೆ ಬ್ಯಾಟರಾಯನಪುರ ಪುರದಲ್ಲಿ ನಡೆದಿದೆ.

    ಬ್ಯಾಟರಾಯನಪುರ ಸಂಚಾರಿ ಪೊಲೀಸ್​ ಠಾಣೆಯ ಸಬ್ ಇನ್ಸ್​ಪೆಕ್ಟರ್ ನಾಗರಾಜ್ ಅವರೇ ಮಗುವನ್ನು ರಕ್ಷಣೆ ಮಾಡಿದವರು. ಬ್ಯಾಡರಹಳ್ಳಿಯ ಬಿ.ಇ.ಎಲ್​. ಬಡಾವಣೆಯ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಕಾಲು ಜಾರಿ ಸಂಪಿನೊಳಗೆ ಬಿದ್ದು, ಪ್ರಜ್ಞೆ ತಪ್ಪಿತ್ತು. ಇದನ್ನು ನೋಡಿದ ಮನೆಯವರು ಆಘಾತಗೊಂಡು, ತಕ್ಷಣಕ್ಕೆ ಏನು ಮಾಡುವುದು ಎಂದು ತೋಚದೆ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದರು. ಈ ವೇಳೆ ಕರ್ತವ್ಯ ಮುಗಿಸಿ ಅದೇ ದಾರಿಯಲ್ಲಿ ಮನೆಗೆ ತೆರಳುತ್ತಿದ್ದ ಎಸ್​ಐ ನಾಗರಾಜು, ಮನೆಯವರು ಕೂಗಾಡುವುದನ್ನು ಕೇಳಿ, ತಕ್ಷಣ ಸ್ಥಳಕ್ಕೆ ಧಾವಿಸಿ, ಮನೆಯವರಿಗೆ ಧೈರ್ಯ ತುಂಬಿ, ಟ್ರಾಫಿಕ್​ ಸಮವಸ್ತ್ರದಲ್ಲೇ ಸಂಪಿನ ಒಳಗೆ ಜಿಗಿದು ಮಗುವನ್ನು ಸುರಕ್ಷಿತವಾಗಿ ಹೊರಗೆ ತಂದರು.

    ಹೊರತಂದ ಸಮಯದಲ್ಲಿ ಮಗು ಪ್ರಜ್ಞೆ ತಪ್ಪಿತ್ತು. ದೇಹದ ಒಳಗೆ ನೀರು ಹೋಗಿರಬಹುದೆಂದು ತಿಳಿದು, ತಕ್ಷಣ ಮಗುವಿಗೆ ಶ್ವಾಸಕೋಶ ಪ್ರಚೋದಕ ಸಿಪಿಆರ್​ ಮಾಡಿ, ತಕ್ಷಣ ಆಸ್ಪತ್ರೆಗೆ ದಾಖಲಿಸಿದರು. ಸೂಕ್ತ ಸಮಯದಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಸರಿಯಾದ ಚಿಕಿತ್ಸೆ ದೊರಕಿ, ಸಾವಿನ ದವಡೆಯಲ್ಲಿ ಸಿಲುಕಿದ್ದ ಮಗು ಮರುಜನ್ಮ ಪಡೆದಿದೆ. ಸಕಾಲಕ್ಕೆ ಸ್ಪಂದಿಸಿ ಮಗುವಿನ ಜೀವ ಉಳಿದ ಶ್ರೇಯಸ್ಸು ನಾಗರಾಜು ಅವರಿಗೆ ಸಲ್ಲುತ್ತದೆ.

    ಈ ಘಟನೆ ಬಳಿಕ ಎಸ್​ಐ ನಾಗರಾಜು ಅವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ತಮ್ಮ ಮಗುವಿನ ಪ್ರಾಣ ಉಳಿಸಿದ್ದಕ್ಕೆ ಕುಟುಂಬಸ್ಥರು ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇಷ್ಟೇ ಅಲ್ಲದೆ, ವಿಜಯನಗರ ಕಾಂಗ್ರೆಸ್​ ಶಾಸಕ ಎಂ.ಕೃಷ್ಣಪ್ಪ, ಪೊಲೀಸ್​ ಆಯುಕ್ತ ದಯಾನಂದ್​ ಸೇರಿದಂತೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಶಾಸಕ ಎಂ ಕೃಷ್ಣಪ್ಪ ಮೆಚ್ಚುಗೆ
    ಬ್ಯಾಡರಹಳ್ಳಿಯ ಬಿ.ಇ.ಎಲ್ ಬಡಾವಣೆಯಲ್ಲಿ ಸುಮಾರು 3:45 ಸಂಜೆ, ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಸಹಾಯಕ ಸಬ್ ಇನ್ಸ್​ಪೆಕ್ಟರ್ ನಾಗರಾಜ್ ಅವರು, ಅಕಸ್ಮಾತ್ತಾಗಿ 10 ಅಡಿಯ ನೀರಿನ ತೊಟ್ಟಿಗೆ ಜಾರಿ ಬಿದ್ದ 2.6 ವರ್ಷದ ಮಗುವನ್ನು ರಕ್ಷಿಸಿಲು ನೀರಿನ ತೊಟ್ಟಿಗೆ ಇಳಿದು, ಮಗುವಿನ ಪ್ರಾಣ ರಕ್ಷಿಸಿ, ಪ್ರಜ್ಞೆ ತಪ್ಪಿದ ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಮಗುವಿನ ಜೀವ ಉಳಿಸಿದ ಶ್ರೇಯ‌ ನಮ್ಮ ಹೆಮ್ಮೆಯ ಆರಕ್ಷಕರಿಗೆ ಸಲ್ಲುತ್ತದೆ. ಸಮಯ ಪ್ರಜ್ಞೆ ತೋರಿ, ಸಾರ್ವಜನಿಕರ ಹಿತಕ್ಕಾಗಿ ಸದಾಕಾಲವೂ ದುಡಿಯುವ ಅಧಿಕಾರಿಗಳಿಗೆ ನಮ್ಮ ಅನಂತಾನಂತ ಧನ್ಯವಾದಗಳು ಎಂದು ವಿಜಯನಗರ ಕಾಂಗ್ರೆಸ್​ ಶಾಸಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಾನವೀಯ ಸೇವೆ
    ಕೆಲಸದ ಒತ್ತಡದ ನಡುವೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜು ಅವರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ಸಂಪಿನಲ್ಲಿ ಮುಳುಗಿದ್ದ ಮಗುವಿನ ರಕ್ಷಣೆ ಮಾಡಿ, ಜೀವ ಉಳಿಸಿದ್ದು ಹೆಮ್ಮೆ ಪಡುವಂತಹ ವಿಷಯ ಎಂದು ಬ್ಯಾಟರಾಯನಪುರ ಠಾಣಾ ಪೊಲೀಸರು ಎಕ್ಸ್​ ಖಾತೆಯಲ್ಲಿ ಫೋಟೋಗಳ ಸಮೇತ ಪೋಸ್ಟ್​ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾದ ದಯಾನಂದ್​, ಇದು ಕರ್ತವ್ಯದ ಕರೆಯನ್ನು ಮೀರಿ ಹೋಗಿದೆ. ಜೀವ ಉಳಿಸುವ, ಮಾನವೀಯತೆಯ ಸೇವೆಯಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

    ನೆಟ್ಟಿಗರ ಪ್ರಶಂಸೆ
    ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಹ ನಾಗರಾಜು ಅವರ ಮಾನವೀಯತೆಗೆ ಸಲಾಂ ಹೊಡೆದಿದ್ದಾರೆ. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಆಶೀರ್ವದಿಸಿದ್ದಾರೆ. ಉತ್ತಮವಾದಂತಹ ಕಾರ್ಯ ಜನರ ನಿರೀಕ್ಷೆಗೂ ಮೀರಿದಂತಹ ಸಾಕ್ಷಾತ್ಕಾರದ ದೃಶ್ಯ ಎಂದಿದ್ದಾರೆ. ನಿಮ್ಮ ಬದ್ಧತೆ, ಸಮಯ ಪ್ರಜ್ಞೆ ಹಾಗೂ ಕರ್ತವ್ಯಪರತೆ ಅಭಿನಂದನಾರ್ಹ ಎಂದೆಲ್ಲ ನೆಟ್ಟಿಗರು ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದಾರೆ.

    ಸೆಲ್ಫಿ ವೇಳೆ ಅಭಿಮಾನಿಯ ಅಸಭ್ಯ ವರ್ತನೆ ಕಂಡು ನಟಿ ಕಾಜಲ್​ ಅಗರವಾಲ್​ ಶಾಕ್​! ವಿಡಿಯೋ ವೈರಲ್​

    ಸುನೀಲ್​ ಗವಾಸ್ಕರ್​ ಬಳಿಕ RCB ಅಭಿಮಾನಿಗಳಿಗೆ ಶಾಕ್​ ಕೊಟ್ಟ ಎ ಬಿ ಡಿವಿಲಿಯರ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts