ಚೆನ್ನೈ: ನಟ ದರ್ಶನ್ ಅಭಿನಯದ ಸ್ವಾಮಿ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಯವಾಗಿರುವ ನಟಿ ಗಾಯತ್ರಿ ಜಯರಾಮನ್ ತಮಿಳು ಚಿತ್ರರಂಗದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ಇಳಯದಳಪತಿ ವಿಜಯ್ ಅಭಿನಯದ ಸೂಪರ್ ಹಿಟ್ ವಸೀಗರ ಸಿನಿಮಾದಲ್ಲಿಯೂ ನಟಿಸುವ ಮೂಲಕ ತುಂಬಾ ಖ್ಯಾತಿಯನ್ನು ಗಳಿಸಿದರು.
ಪ್ರಭುದೇವ ನಾಯಕನಾಗಿ ನಟಿಸಿದ್ದ ತಮಿಳಿನ ಮನ ತಿರುಡಿವಿಟ್ಟೈ ಚಿತ್ರದ ಮೂಲಕ ಗಾಯತ್ರಿ ಜಯರಾಮನ್ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಇದರ ನಂತರ, ಏಪ್ರಿಲ್‌ನಲ್ಲಿ ಅವರು ವಿಜಯ್ ಅವರ ವಸೀಗರ ಚಿತ್ರದಲ್ಲಿ ನಟಿಸಿದರು. ಆ ನಂತರ ಮಲಯಾಳಂ, ಕನ್ನಡ ಮತ್ತು ತೆಲುಗಿನಲ್ಲಿ ಕೆಲವೇ ಚಿತ್ರಗಳಲ್ಲಿ ನಟಿಸಿದರು. ಸದ್ಯ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಗಾಯತ್ರಿ ಜಯರಾಮನ್, ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿದ್ದಾರೆ.
ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಗಾಯತ್ರಿ ಜಯರಾಮನ್, ವಿಜಯ್ ಜತೆ ವಸೀಗರ ಚಿತ್ರದಲ್ಲಿ ನಟಿಸಿದ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವಿಜಯ್ರನ್ನು ಕೊಂಡಾಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಹೀರೋ ಆಗಿರುವ ಅನೇಕ ನಟರು ನಟಿಯರಿಗೆ ತೊಂದರೆ ಕೊಡುವುದಿಲ್ಲ. ಅದರಲ್ಲೂ ನಟ ವಿಜಯ್ ಜತೆ ನಟಿಸುವಾಗ ನಟಿಯರಿಗೆ ಸಂಪೂರ್ಣ ಭದ್ರತೆ ಇರುತ್ತದೆ ಎಂದಿದ್ದಾರೆ.
ವಿಜಯ್ ಮುಂದೆ ಬಿಕಿನಿಯಲ್ಲಿ ನಟಿಸಿದರೂ ನಾನು ಸೇಫ್ ಆಗಿರುತ್ತೇನೆ. ವಿಜಯ್ ಅವರು ಅಷ್ಟೊಂದು ಕೇರ್ ಮಾಡುತ್ತಾರೆ. ನಾನು ಇಲ್ಲಿಯವರೆಗೆ ನಟಿಸಿದ ಅನೇಕ ನಾಯಕರು ಏನೂ ಹೇಳದಿದ್ದರೂ, ಅವರ ದೃಷ್ಟಿಕೋನದಿಂದ ಅವರು ನಮ್ಮನ್ನು ಹೇಗೆ ನೋಡುತ್ತಾರೆ ಎಂಬುದು ನಮಗೆ ತಿಳಿಯುತ್ತದೆ. ಆದರೆ, ವಿಜಯ್ ಇದರಲ್ಲಿ ಮಿಸ್ಟರ್ ಕ್ಲೀನ್ ಎಂದು ಗಾಯತ್ರಿ ಸರ್ಟಿಫಿಕೇಟ್ ನೀಡಿದ್ದಾರೆ. (ಏಜೆನ್ಸೀಸ್)