ಸಿನಿವಾಣಿ

ಪ್ರೀತಿ, ಪ್ರೇಮ, ಅಧ್ಯಾತ್ಮ; ಟಾಮ್ ಆಂಡ್ ಜೆರ್ರಿಯಲ್ಲಿ ಮನರಂಜನೆ ಜತೆಗೆ ಸಂದೇಶ

ಬೆಂಗಳೂರು: ‘ಟಾಮ್ ಆಂಡ್ ಜೆರ್ರಿ’ ಅಂದ ತಕ್ಷಣ ಮೊದಲಿಗೆ ನೆನಪಾಗುವುದು ಬೆಕ್ಕು ಇಲಿಯ ಕಾರ್ಟೂನ್ ವಿಡಿಯೋಗಳು. ಇದೀಗ ‘ಟಾಮ್ ಆಂಡ್ ಜೆರ್ರಿ’ ಹೆಸರಿನ ಸಿನಿಮಾ ಸಿದ್ಧವಾಗಿ ಇದೇ ವಾರ (ನ.12) ಬಿಡುಗಡೆ ಆಗುತ್ತಿದೆ. ರಾಘವ್ ವಿನಯ್ ಶಿವಗಂಗೆ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ‘ಗಂಟುಮೂಟೆ’ ಸಿನಿಮಾದಲ್ಲಿ ನಟಿಸಿದ್ದ ನಿಶ್ಚಿತ್ ನಾಯಕನಾಗಿ ನಟಿಸಿದರೆ, ಅವರಿಗೆ ‘ಮಾಯಾಬಜಾರ್’ ಸುಂದರಿ ಚೈತ್ರಾ ರಾವ್ ಜತೆಯಾಗಿದ್ದಾರೆ.

ಹಾಗಾದರೆ, ಏನಿದು ‘ಟಾಮ್ ಆಂಡ್ ಜೆರ್ರಿ’? ಈ ಬಗ್ಗೆ ಹೇಳಿಕೊಳ್ಳುವುದಕ್ಕೆ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಮೊದಲಿಗೆ ಮಾತು ಆರಂಭಿಸಿದ ನಿರ್ದೇಶಕ ರಾಘವ್, ‘ಪ್ರಸ್ತುತ ಪೀಳಿಗೆಯ ಸುತ್ತ ಇಡೀ ಸಿನಿಮಾ ಸಾಗಲಿದೆ. ಪ್ರೀತಿ, ಭಾವನೆ, ಸಂಬಂಧ ಹೀಗೆ ಹಲವು ವಿಚಾರಗಳನ್ನು ತೆರೆಮೇಲೆ ತೋರಿಸಿದ್ದೇವೆ. ಅಧ್ಯಾತ್ಮವೂ ಸಿನಿಮಾದಲ್ಲಿದೆ. ‘ಟಾಮ್ ಆಂಡ್ ಜೆರ್ರಿ’ ಶೀರ್ಷಿಕೆಯ ವಿಶೇಷತೆಯೂ ಸಿನಿಮಾದಲ್ಲಿಯೇ ನೋಡಿ’ ಎಂದರು.

‘ಶೀರ್ಷಿಕೆ ಹೇಳುವಂತೆ ಇಲ್ಲಿಯೂ ನಾಯಕ ಮತ್ತು ನಾಯಕಿ ನಡುವೆ ಕಿತ್ತಾಟ ಇದೆ. ಆದರೆ ಆ ಕಿತ್ತಾಟ ಏತಕ್ಕಾಗಿ? ಅದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ. ಪ್ರತಿ 20 ನಿಮಿಷಕ್ಕೆ ಸಿನಿಮಾ ಬೇರೆ ಶೈಲಿಗೆ ಬದಲಾಗಲಿದೆ. ಕಾಮಿಡಿಯೂ ಇದೆ. ಪ್ರೀತಿ ಮತ್ತು ತಾಯಿಯ ಸೆಂಟಿಮೆಂಟ್ ಸಹ ಚಿತ್ರಕ್ಕೆ ಬೋನಸ್’ ಎಂಬುದು ನಾಯಕ ನಿಶ್ಚಿತ್ ಮಾತು.

ಅದೇ ರೀತಿ ಗೆಟಪ್ ವಿಚಾರವಾಗಿಯೇ ವಿಭಿನ್ನವಾಗಿ ಕಾಣಿಸಿಕೊಂಡಿರುವ ಚೈತ್ರಾ ರಾವ್ ಚಿತ್ರದಲ್ಲಿ ಎನ್​ಜಿಒ ನಡೆಸುವವರಾಗಿದ್ದಾರೆ. ‘ಯಾರ ಬಗ್ಗೆಯೂ ಯೋಚಿಸದೆ, ಅವಳಿಷ್ಟದ ಹಾಗೆ ಬದುಕುವ ಸತ್ಯ ಹೆಸರಿನ ಪಾತ್ರ ನನ್ನದು. ನಾಳೆ ಬಗ್ಗೆ ಚಿಂತಿಸದೆ, ಈ ಕ್ಷಣವನ್ನೂ ಆಸ್ವಾದಿಸುವವಳು. ಮನರಂಜನೆ ಜತೆಗೆ ಸಂದೇಶವೂ ಸಿನಿಮಾದಲ್ಲಿದೆ’ ಎನ್ನುತ್ತಾರೆ ಚೈತ್ರಾ.

ಮ್ಯಾಥ್ಯೂಸ್ ಮನು ಸಂಗೀತ ನೀಡಿದ್ದು, ಸಂಕೇತ್ ಛಾಯಾಗ್ರಹಣ, ಸೂರಜ್ ಸಂಕಲನ ಚಿತ್ರಕ್ಕಿದೆ. ರಿದ್ಧಿಸಿದ್ಧಿ ಫಿಲಂಸ್ ಬ್ಯಾನರ್​ನಲ್ಲಿ ರಾಜು ಶೆರಿಗಾರ್ ಚಿತ್ರ ನಿರ್ವಿುಸಿದ್ದಾರೆ. ತಾರಾ, ಜೈಜಗದೀಶ್, ‘ಕಡ್ಡಿಪುಡಿ’ ಚಂದ್ರು, ರಾಕ್​ಲೈನ್ ಸುಧಾಕರ್, ಸಂಪತ್ ಕುಮಾರ್ ಚಿತ್ರದಲ್ಲಿದ್ದಾರೆ.