ಸಿನಿವಾಣಿ

ಮುಖ್ಯಮಂತ್ರಿಗಳಿಗೆ ಕೋಟಿ ವಂದನೆ ಸಲ್ಲಿಸಿದ ‘ದುನಿಯಾ’ ವಿಜಯ್

ಸದ್ಯ ‘ಸಲಗ’ ಚಿತ್ರದ ಬಿಡುಗಡೆಗೆ ಪ್ಲಾನ್ ಮಾಡುತ್ತಿರುವ ನಟ-ನಿರ್ದೇಶಕ ‘ದುನಿಯಾ’ ವಿಜಯ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಮುಖ್ಯಮಂತ್ರಿಗಳಿಗೆ ಕೋಟಿ ವಂದನೆ ಸಲ್ಲಿಸಿದ್ದಾರೆ.

ಇಷ್ಟಕ್ಕೂ ‘ದುನಿಯಾ’ ವಿಜಯ್ ಯಾಕೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಬೇಕು, ಆ ಪತ್ರದಲ್ಲಿ ಅವರಿಗೆ ಥ್ಯಾಂಕ್ಸ್ ಹೇಳಬೇಕು ಎಂಬ ಪ್ರಶ್ನೆ ಬರುವುದು ಸಹಜ. ಆ ಪ್ರಶ್ನೆಗೆ ಉತ್ತರವೇನೆಂದರೆ, ಜಿಮ್‌ಗಳನ್ನು ಪುನಃ ಪ್ರಾರಂಭಿಸಬೇಕು, ಜಿಮ್ ಟ್ರೈನರ್‌ಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಇದಕ್ಕೂ ಮುನ್ನ ವಿಜಯ್, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.
ಈ ಮಧ್ಯೆ ಕಳೆದ ಕೆಲವು ದಿನಗಳಿಂದ ಲಾಕ್‌ಡೌನ್ ಸಡಿಲಗೊಂಡಿದ್ದು, ಹಲವು ಉದ್ಯಮಗಳು ಪ್ರಾರಂಭವಾಗಿದೆ. ಈ ಮಧ್ಯೆ ಇದೇ ಮೇ 18ರಿಂದ ಹೋಟೆಲ್ ಮತ್ತು ಜಿಮ್‌ಗಳು ಸಹ ಪ್ರಾರಂಭವಾಗುವ ಮುನ್ಸೂಚನೆ ಇದೆ. ಜಿಮ್ ಪ್ರಾರಂಭವಾಗುತ್ತಿರುವ ಖುಷಿಯಲ್ಲಿ, ಟ್ವೀಟ್ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

‘ಜಿಮ್ ಟ್ರೈನರ್‌ಗಳ ಕಷ್ಟ ಯಾವ ಮಟ್ಟದಲ್ಲಿದೆ ಎನ್ನುವುದರ ಬಗ್ಗೆ ನಾನು ಇತ್ತೀಚೆಗಷ್ಟೇ ಎರಡು ಬಾರಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದೇನೆ. ನಾನು ಒಬ್ಬ ಮಾಜಿ ಜಿಮ್ ಟ್ರೈನರ್ ಆಗಿ, ಅವರು ಪ್ರಸ್ತುತ ಎದುರಿಸುತ್ತಿರುವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವಿವರವಾಗಿ ಬರೆದಿದ್ದೆ. ಅದು ಮಾನ್ಯ ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯೂ ಆಗಿತ್ತು. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪನವರು ಇದೇ ತಿಂಗಳ 18ರಿಂದ ಹೋಟೆಲ್ ಜತೆಗೆ ಜಿಮ್‌ಗಳನ್ನು ಕೂಡ ತೆರೆಯಲು ಸಮ್ಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅವರ ಈ ಸಕಾರಾತ್ಮಕ ಸ್ಪಂದನೆಗೆ ನಾಡಿನ ಎಲ್ಲಾ ಜಿಮ್ ಟ್ರೈನರ್‌ಗಳ ಪರವಾಗಿ ಕೋಟಿ ವಂದನೆಗಳು. ಅದೇ ಸಂದರ್ಭದಲ್ಲಿ, ಜಿಮ್ ಟ್ರೈನರ್‌ಗಳಿಗೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ಕಳಕಳಿಯ ಅಪೇಕ್ಷೆ’ ಎಂದು ವಿಜಯ್ ಟ್ವೀಟ್ ಮಾಡಿದ್ದಾರೆ.