ಮಲಯಾಳಂನ ಸೂಪರ್ ಸ್ಟಾರ್ ಮಮ್ಮೂಟ್ಟಿ ಹೊಸದೊಂದು ದಾಖಲೆಯನ್ನು ಸದ್ದಿಲ್ಲದೆ ಬರೆದಿದ್ದಾರೆ. ಕಳೆದ 40 ವರ್ಷಗಳಿಂದ ಹೀರೋ ಆಗಿ ಸತತವಾಗಿ ಚಿತ್ರಗಳನ್ನು ಮಾಡಿಕೊಂಡು ಬರುತ್ತಿರುವುದೇ ಒಂದು ದಾಖಲೆ. ಅದು ಬಿಟ್ಟು ಇನ್ನೇನು ಮಾಡಿದರಪ್ಪಾ ಅವರು ಎಂಬ ಪ್ರಶ್ನೆ ಬರುವುದು ಸಹಜ.
ಇದನ್ನೂ ಓದಿ: ಮರಾಠಿ ಚಿತ್ರದ ರೀಮೇಕ್ನಲ್ಲಿ ಸಲ್ಮಾನ್ ಖಾನ್!
ವಿಷಯವೇನೆಂದರೆ, ಕಳೆದ 150 ದಿನಗಳಿಂದ ಮಮ್ಮೂಟ್ಟಿ ಮನೆಯಿಂದ ಹೊರಬರದೆ ಹೊಸ ದಾಖಲೆ ಬರೆದಿದ್ದಾರಂತೆ. ಈ ಬಗ್ಗೆ ಅವರ ಮಗ ದುಲ್ಕರ್ ಸಲ್ಮಾನ್ ಖಚಿತಪಡಿಸಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಗಳೊಂದಿಗಿನ ಚರ್ಚೆಯಲ್ಲಿ ಮಾತನಾಡಿರುವ ದುಲ್ಕರ್, ಈ ವಿಷಯವನ್ನು ಹೇಳಿದ್ದಾರೆ.
'ಅಪ್ಪ ವೈಯಕ್ತಿಕವಾಗಿ ಒಂದಲ್ಲಾ ಒಂದು ಗುರಿ ಇಟ್ಟುಕೊಂಡು, ಅದನ್ನು ಮುಟ್ಟುವ ಪ್ರಯತ್ನ ಮಾಡುತ್ತಾರೆ. ಅದೇ ರೀತಿ, ಲಾಕ್ಡೌನ್ ಘೋಷಣೆಯಾದಾಗ, ಮನೆಯಲ್ಲೇ ಎಷ್ಟು ದಿನ ಇರೋಕೆ ಸಾಧ್ಯ ಅನ್ನೋದನ್ನ ನೋಡಬೇಕು ಅಂತ ಅಂದುಕೊಂಡಿದ್ದರು. ಅದರಂತೆ ಅವರು ಕಳೆದ 150 ದಿನಗಳಿಂದ ಮನೆಯಿಂದ ಹೊರಬಂದಿಲ್ಲ' ಎಂದು ದುಲ್ಕರ್ ಹೇಳಿದ್ದಾರೆ.
'ಶೂಟಿಂಗ್ ಇಲ್ಲದಿದ್ದರೆ ಬೇಡ, ಕನಿಷ್ಠ ಪಕ್ಷ ಕಾರ್ನಲ್ಲಿ ಒಂದು ರೌಂಡ್ ಹೋಗೋಣ ಬನ್ನಿ ಎಂದು ಕರೆದೆ. ಆದರೆ, ಅದಕ್ಕೂ ಅವರು ಒಪ್ಪುತ್ತಿಲ್ಲ. ಇನ್ನೂ ಎಷ್ಟು ದಿನ ಮನೆಯಲ್ಲೇ ಇರೋಕೆ ಸಾಧ್ಯವೋ ನೋಡೋಣ ಎಂದು ಅವರು ಹೇಳುತ್ತಿದ್ದಾರೆ. ಸದ್ಯಕ್ಕೆ ಚಿತ್ರೀಕರಣವಿಲ್ಲದಿರುವುದರಿಂದ, ಇನ್ನಷ್ಟು ದಿನ ಅವರು ಇದೇ ರೀತಿ ಮನೆಯಲ್ಲಿ ಇರುವ ಸಾಧ್ಯತೆ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ತೆಲುಗು ‘ಖರಾಬು’ ಬಿಡುಗಡೆ ಆಯ್ತು …
ಒಂದು ಕಡೆ ಮಮ್ಮೂಟ್ಟಿ ಮನೆಯಲ್ಲೇ ಇದ್ದರೆ, ದುಲ್ಕರ್ ಮಾತ್ರ ಅವಕಾಶ ಸಿಕ್ಕಾಗಲೆಲ್ಲಾ ಮನೆಯಿಂದ ಹೊರಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ.