ಸಿನಿವಾಣಿ

ನಿಹಾಲ್​ ಬಹಳ ಸಮರ್ಥವಾಗಿ ನನ್ನ ಪಾತ್ರವನ್ನು ತೆರೆ ಮೇಲೆ ತಂದಿದ್ದಾರೆ: ಡಾ. ವಿಜಯ ಸಂಕೇಶ್ವರ

ಬೆಂಗಳೂರು: 'ನಟ ನಿಹಾಲ್​ ಅವರು ಬಹಳ ಚೆನ್ನಾಗಿ ನನ್ನ ಪಾತ್ರವನ್ನು ತೆರೆಯ ಮೇಲೆ ತಂದಿದ್ದಾರೆ. ಅವರು ನನ್ನ ಸ್ಟೈಲ್​ ಅನುಕರಿಸುವುದನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಅವರೂ ಎಲ್ಲಿ ನನ್ನ ತರಹವೇ ಪೇಪರ್​ ಮತ್ತು ಲಾರಿ ಬಿಜಿನೆಸ್​ ಮಾಡುತ್ತಾರೋ ಎಂಬ ಸಂಶಯ ನನಗೆ ಉಂಟಾಗಿದೆ' ಎಂದು ಡಾ. ವಿಜಯ ಸಂಕೇಶ್ವರ ಹೇಳಿದ್ದಾರೆ.

ಇಂದು ಒರಾಯನ್​ ಮಾಲ್​ನ ಲೇಕ್ ವ್ಯೂನಲ್ಲಿ 'ವಿಜಯಾನಂದ' ಚಿತ್ರದ ಹಾಡು ಬಿಡುಗಡೆ ಮಾಡಿ ಮಾತನಾಡಿದ ಅವರು, 'ನಿಹಾಲ್​ ಚಿತ್ರದಲ್ಲಿ ಎದೆ ಸೆಟಿಸಿಕೊಂಡು ನಡೆಯುತ್ತಾರೆ. ನಾನು ಸಹ ಹಾಗೆಯೇ ನಡೆಯುತ್ತಿದ್ದೆ. ಅವರನ್ನು ಇತ್ತೀಚೆಗೆ ಗಮನಿಸುತ್ತಿದ್ದೇನೆ. ಅವರು ಪರಕಾಯ ಪ್ರವೇಶ ಮಾಡುತ್ತಿದ್ದಾರೆ ಎಂದನಿಸುತ್ತಿದೆ. ನಾನು ಜೀವನದಲ್ಲಿ ಯಾವತ್ತೂ ಹೆದರಿಲ್ಲ. ಯಾವುದರ ಬಗ್ಗೆ ಚಿಂತಿಸಿಲ್ಲ. ನಿಹಾಲ್​ ಅವರ ಸ್ಟೈಲ್​ ನೋಡಿದರೆ ಅವರು ಈ ಚಿತ್ರ ಮುಗಿದ ಮೇಲೆ ಪತ್ರಿಕೆ ಅಥವಾ ಸಾರಿಗೆ ಬಿಜಿನೆಸ್​ ಮಾಡಬಹುದು ಎಂದನಿಸುತ್ತಿದೆ' ಎಂದು ತಮಾಷೆ ಮಾಡಿದರು.

ನಿಹಾಲ್​ ಬಹಳ ಕಷ್ಟಪಟ್ಟು ತಮ್ಮ ಪಾತ್ರ ನಿರ್ವಹಿಸಿದ್ದಾರೆ ಎಂದ ಡಾ. ವಿಜಯ ಸಂಕೇಶ್ವರ, 'ನನ್ನನ್ನು ಅನುಕರಿಸುವಲ್ಲಿ ಮತ್ತು ತೆರೆಯ ಮೇಲೆ ಚೆನ್ನಾಗಿ ತರುವಲ್ಲಿ ನಿಹಾಲ್​ ಬಹಳ ಕಷ್ಟಪಟ್ಟಿದ್ದಾರೆ. ಇನ್ನು, ನಿರ್ದೇಶಕಿ ರಿಷಿಕಾ ಶರ್ಮ ಅವರ ಆತ್ಮವಿಶ್ವಾಸ ನೋಡಿ, ಅವರಿಗೆ ಒಂದು ಅವರಿಗೆ ಅವಕಾಶ ಕೊಡಬೇಕು ಎಂದನಿಸಿತು. ಅವರು ಶ್ರದ್ಧೆಯಿಂದ ಎರಡು ವರ್ಷಗಳ ಕಾಲ ಬರೀ ಕೆಲಸ ಮಾಡಿಲ್ಲ, ತಪಸ್ಸು ಮಾಡಿದ್ದಾರೆ' ಎಂದು ಹೇಳಿದರು.